

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ತ್ರಾಸಿ- ಮರವಂತೆ ಕಡಲ ತೀರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿರುವ ಗೂಡಂಗಡಿಗಳಿಗೆ ತಿಂಗಳೊಳಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ನೀಡಿದ ಭರವಸೆ ವರ್ಷ ನಾಲ್ಕು ಕಳೆದರೂ ಇನ್ನೂ ಈಡೇರಿಲ್ಲ.
ಸುಮಾರು ನಾಲ್ಕು ವರ್ಷಗಳ ಹಿಂದೆ ತ್ರಾಸಿ-ಮರವಂತೆ ಕಡಲ ತೀರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿರುವ ಸುಮಾರು 28 ಗೂಡಂಗಡಿಗಳ ತೆರವಿಗೆ ಕುಂದಾಪುರ ಉಪವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ತೆರವುಗೊಳಿಸಿದ್ದು, ಕಾರ್ಯಾಚರಣೆ ವಿರೋಧಿಸಿ ಕೆಲವು ಅಂಗಡಿ ಮಾಲೀಕರು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಮೂಲಕ ತೀವ್ರ ಪ್ರತಿರೋದ ಒಡ್ಡಿದ್ದರು.
ಅಧಿಕಾರಿಗಳು ಎಲ್ಲ ಗೂಡಂಗಡಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಗೂಡಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿಗಳ ತೆರವುಗೊಳಿಸಿದ್ದರು. ಅಧಿಕಾರಿಗಳ ಭರವಸೆಗೆ ಭರ್ತಿ ನಾಲ್ಕು ವರ್ಷ ತುಂಬಿದ್ದು, ಆದರೆ ಕಾರ್ಯರೂಪಕ್ಕೆ ಇನ್ನೂ ಬಂದಿಲ್ಲ. ಇದು ಗೂಡಂಗಡಿ ಮಾಲೀಕರ ಸಹಿತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಇನ್ನೊಂದು ಬದಿಯಲ್ಲಿ ಗೂಡಂಗಡಿಗಳನ್ನು ಇಡುವ ಪ್ರಯತ್ನ ಆರಂಭಗೊಂಡಿದ್ದು, ಸುಮಾರು ಹತ್ತಕ್ಕೂ ಅಧಿಕ ಗೂಡಂಗಡಿಗಳು ಈಗಾಗಲೇ ತಲೆ ಎತ್ತಿವೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ. ತೆರವುಗೊಂಡ ಗೂಡಂಗಡಿಗಳ ಬದಲಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸದಿದ್ದರೆ ಮಾಲೀಕರ ಸಹಿತ ಸಾರ್ವಜನಿಕರ ಅಸಮಾಧಾನ ಮತ್ತಷ್ಟು ಹೆಚ್ಚುವ ಸಂಭವವಿದೆ.
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಭಾರಿ ವಾಹನಗಳು ನಿಲುಗಡೆಗೊಳಿಸುತ್ತಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳಲಿವೆ. ಈ ಎಲ್ಲ ಕಾರಣಗಳಿಂದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿತ್ತು ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದರು.
ಕೋಸ್ಟಲ್ ಸರ್ಕ್ಯೂಟ್ ಯೋಜನೆಯಡಿ ತ್ರಾಸಿಯಲ್ಲಿ 10 ಅಂಗಡಿಕೋಣೆಗಳು ಮತ್ತು ಶೌಚಗೃಹ ನಿರ್ಮಾಣಗೊಂಡಿದ್ದು, ಕೆಲವೊಂದು ತಾಂತ್ರಿಕ ಕಾರಣಗಳಿಂದ ಇದು ಉಪಯೋಗಕ್ಕೆ ನೀಡಲಾಗಿಲ್ಲ. ಅವುಗಳ ನಿರ್ವಹಣೆಗಾಗಿ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ವ್ಯವಸ್ಥಿತ ಸೇವೆಗೆ ಇವುಗಳು ದೊರೆಯಲಿವೆ. ಕುಮಾರ್, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ತ್ರಾಸಿ ಬೀಚ್‌ನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಗೂಡಂಗಡಿಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿವೆ. ಗೂಡಂಗಡಿಗಳು ನಿರ್ಮಾಣಗೊಂಡು ಅನೇಕ ವರ್ಷಗಳು ಕಳೆದಿದ್ದರೂ ಇದರ ಉಪಯೋಗ ಆಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಗಮನಹರಿಸಿ ಇದರ ಪ್ರಯೋಜನ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ದೊರೆಯುವಂತಾಗಬೇಕು. ಮಿಥುನ್ ಎಂ.ಡಿ. ಬಿಜೂರು ತ್ರಾಸಿ ಗ್ರಾಪಂ ಅಧ್ಯಕ್ಷ