

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಚುನಾವಣೆ ಬಾಂಡ್ ಹಗರಣವನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಂಗಲ್ಯ ಸರ ಕಿತ್ತುಕೊಳ್ಳುತ್ತಾರೆ ಎಂಬ ಅವರ ಹೇಳಿಕೆ ಪ್ರಧಾನಿ ಸ್ಥಾನದ ಘನತೆಗೆ ಸರಿಯಾದುದಲ್ಲ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ರಾಜ್ಯ ಮಟ್ಟದ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಾಂಡ್ ಮೂಲಕ ಹಣ ಕೊಟ್ಟವರಿಗೆ ಬಿಜೆಪಿ ಅನುಕೂಲ ಮಾಡಿಕೊಟ್ಟಿದೆ. ಸಿಬಿಐ, ಇಡಿ, ಐಟಿ ದಾಳಿಯ ಭಯ ಹುಟ್ಟಿಸಿ ಚುನಾವಣೆ ಬಾಂಡ್ ಮೂಲಕ ಹಣ ಪಡೆದಿದ್ದಾರೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜಾತ್ಯಾತೀತ ಪಕ್ಷದ ಸಂಸದರೊಬ್ಬರು ಮಹಿಳೆಯರ ಮಾಂಗಲ್ಯ ಕಿತ್ತುಕೊಳ್ಳುವಂಥ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಗ್ಯಾರಂಟಿ ಹೈಜಾಕ್ :
ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದರು. ಇದೀಗ ಬಿಜೆಪಿಯವರು ಮೋದಿ ಗ್ಯಾರಂಟಿ ಎಂದು ಹೇಳುವ ಮೂಲಕ ನಮ್ಮ ಗ್ಯಾರಂಟಿಯನ್ನು ಹೈಜಾಕ್ ಮಾಡಿದ್ದಾರೆ. ಈ ಹಿಂದೆ ತಾವು ಅಧಿಕಾರಕ್ಕೆ ಬಂದರೆ ಆಧಾರ್ ಕಾರ್ಡ್ ರದ್ದು ಮಾಡುತ್ತೇವೆ ಎಂದು ಹೇಳಿದ್ದರು. ಇದೀಗ ಆಧಾರ್ ಕಾರ್ಡ್ನಿಂದ ಆಗಿರುವ ಅನುಕೂಲಗಳನ್ನು ತಮ್ಮ ಸಾಧನೆಯೆಂದು ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಕಳೆದ 9 ತಿಂಗಳಲ್ಲಿ ರಾಜ್ಯದ ಜನತೆಗೆ 36 ಸಾವಿರ ಕೋಟಿ ರೂ. ಹಂಚಿಕೆ ಮಾಡಿದ್ದೇವೆ. ಪ್ರಸಕ್ತ ಬಜೆಟ್ನಲ್ಲಿ 58 ಸಾವಿರ ಕೋಟಿ ರೂ. ಒದಗಿಸಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ, ಪಕ್ಷದ ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಇದ್ದರು.