

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ತುಸು ಇಳಿಮುಖವಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಹೊರತೂ ಧಾರಾಕಾರ ಮಳೆಯಾಗಿಲ್ಲ. ಜೂ.14ರಂದು ಕರಾವಳಿಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ದ.ಕ.ಜಿಲ್ಲೆಯಲ್ಲೂ ಗುರುವಾರ ಮಳೆ ಕಡಿಮೆಯಾಗಿದೆ. ನಸುಕಿನ ಜಾವ ತುಂತುರು ಮಳೆ ಕಾಣಿಸಿದ್ದು ಬಿಟ್ಟರೆ ಹಗಲು ಪೂರ್ತಿ ಅಲ್ಲಲ್ಲಿ ಹನಿ ಮಳೆಗೆ ಸೀಮಿತಗೊಂಡಿತ್ತು. ಮಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಇಡೀ ದಿನ ಮೋಡ, ಬಿಸಿಲಿನ ವಾತಾವರಣ ಕಂಡುಬಂದಿದೆ. ಸಂಜೆ ವೇಳೆ ತುಸು ತುಂತುರು ಹನಿದಿದೆ.
ಈಗಿನಂತೆ ಮಹಾರಾಷ್ಟ್ರ ಕರಾವಳಿಯಲ್ಲಿ ಉಂಟಾಗಿರುವ ವಾಯು ನಿಮ್ನತೆಯ (ಕಡಿಮೆ ಒತ್ತಡ) ಪರಿಣಾಮದಿಂದ ಮುಂಗಾರು ಮಾರುತಗಳು ಕೇಂದ್ರೀಕೃತಗೊಂಡು ಗೋವಾ ಕರಾವಳಿಮೂಲಕ ಸಾಕಗುತ್ತಿವೆ. ಇದರಿಂದ ಉತ್ತರ ಕನ್ನಡ ಭಾಗಗಳಲ್ಲಿ ಜೂನ್ 14ರಂದು ಉತ್ತಮ ಮಳೆಯ ಮುನ್ಸೂಚನೆ ಇದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜೂ.14ರಂದು ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಜೂ.19ರ ವರೆಗೆ ಐದು ದಿನಗಳ ಕಾಲ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚೆನೆ ಇದೆ. ಉಡುಪಿ, ಕುಂದಾಪುರ, ಗೋವಾ, ಉತ್ತರ ಕನ್ನಡ ಗಡಿಭಾಗದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.
*ಮೂಲ್ಕಿಯಲ್ಲಿ ಗರಿಷ್ಠ ಮಳೆ
ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಪ್ರಮಾಣ ತುಂಬಾ ಕಡಿಮೆಯಾಗಲಿದೆ. ಜೂನ್ 19ರ ತನಕ ದಕ್ಷಿಣ ಕರಾವಳಿ ಭಾಗಗಳಲ್ಲಿಯೂ ಮಳೆ ಮುಂದುವರಿಯುವ ಲಕ್ಷಣಗಳಿವೆ. ನಂತರ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗುರುವಾರ ಬೆಳಗ್ಗಿನ ವರೆಗೆ ದ.ಕ.ಜಿಲ್ಲೆಯ ಮಂಗಳೂರು ಹಾಗೂ ಮೂಲ್ಕಿಯಲ್ಲಿ ಗರಿಷ್ಠ ತಲಾ 33.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ದಿನದ ಸರಾಸರಿ ಮಳೆ 30.3 ಮಿ.ಮೀ. ಆಗಿದೆ. ಬೆಳ್ತಂಗಡಿ 31.3 ಮಿ.ಮೀ, ಬಂಟ್ವಾಳ 28.3 ಮಿ.ಮೀ, ಪುತ್ತೂರು 30.6 ಮಿ.ಮೀ, ಸುಳ್ಯ 31.5 ಮಿ.ಮೀ, ಮೂಡುಬಿದಿರೆ 30.2 ಮಿ.ಮೀ, ಕಡಬ 30.1 ಮಿ.ಮೀ, ಉಳ್ಳಾಲ 30.1 ಮಿ.ಮೀ. ಮಳೆ ದಾಖಲಾಗಿದೆ.