

ಹುಬ್ಬಳ್ಳಿ : ಏರೋಸ್ಟೇಸ್ ಪಾರ್ಕ್ ನಿರ್ಮಾಣಕ್ಕಾಗಿ ದೇವನಹಳ್ಳಿಯಲ್ಲಿ ಭೂಸ್ವಾಧಿನ ಪಡಿಸಿಕೊಳ್ಳುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ. ಹೀಗಾಗಿ, ಉದ್ದೇಶಿತ ಈ ಪಾರ್ಕ್ ಅನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಾಪಿಸುವಂತೆ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಸಹ ಸಂಚಾಲಕ ನರೇಂದ್ರ ಕುಲಕರ್ಣಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡದಲ್ಲಿ ಏರೋಸ್ಪೇಸ್ ಪಾರ್ಕ್ ಸ್ಥಾಪನೆಯಿಂದ ಪ್ರಾದೇಶಿಕ ಅಸಮತೋಲನ ಒಂದಿಷ್ಟು ಕಡಿಮೆಯಾಗಲು ಸಹಾಯವಾಗುತ್ತದೆ ಎಂದರು.
ಅವಳಿ ನಗರದಲ್ಲಿ ಸರ್ಕಾರದ ಸಾಕಷ್ಟು ಪ್ರಮಾಣದ ಭೂಮಿ ಇದೆ. ಟಾಟಾ ಮಾಕೋಪೊಲೊ ಹಾಗೂ ಬೇಲೂರು ಕೈಗಾರಿಕಾ ಪ್ರದೇಶದ ಬಳಿ ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ಅನುಕೂಲಕರ ವಾತಾವರಣ ಇದೆ ಎಂದು ಹೇಳಿದರು.
ಏರೋಸ್ಪೇಸ್ ಪಾರ್ಕ್ ಸ್ಥಾಪನೆಯಿಂದ ಈ ಭಾಗದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತವೆ. ವಿಶೇಷವಾಗಿ ಇಂಜಿನಿಯರಿಂಗ್, ತಾಂತ್ರಿಕ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಗಳಿಗೆ ಅವಕಾಶ ಸಿಗುತ್ತದೆ. ಉತ್ತರ ಕರ್ನಾಟಕದ ಈ ಆಗ್ರಹಕ್ಕೆ ಸರ್ಕಾರ ಸ್ಪಂಧಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಬೆಳಗಾವಿ ವಿಭಾಗದ ಕಾರ್ಯಕಾರಿಣಿ ಸದಸ್ಯ ಶ್ರೀಮಂತ ಧನಗಾರ, ಧಾರವಾಡ ಜಿಲ್ಲಾ ವಿಭಾಗದ ಚಂದ್ರಕಾಂತ ಗಡಕರಿ, ಉದ್ಯಮಿ ಮೃತ್ಯುಂಜಯ ಮರೋಳ ಹಾಗೂ ಮಹಾಂತೇಶ ಬತ್ಲಿ ಸುದ್ದಿಗೋಷ್ಠಿಯಲ್ಲಿ ಇದ್ದರು.