ಅನುದಾನಕ್ಕೆ ತಕ್ಕಂತೆ ಕ್ರಿಯಾಯೋಜನೆ ಸಿದ್ಧ

27ss1gramasabhe udgatane
ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮಸಭೆಯನ್ನು ಮನು ಉದ್ಘಾಟಿಸಿದರು.
Published on

ಶನಿವಾರಸಂತೆ: ಸಮಿಪದ ನಿಡ್ತ ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಗ್ರಾಮಸಭೆ ಬುಧವಾರ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಎಚ್.ಡಿ.ಮನು ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

ಸಭೆ ಪ್ರಾರಂಭದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಾಜಿ ಸದಸ್ಯ ವಿಜಯ್ ಆಕ್ಷೇಪ ವ್ಯಕ್ತಪಡಿಸಿದರು. ನಿಯಮಾವಳಿಯಂತೆೆ ಸಭೆ ನಡೆಯಬೇಕು. ಈ ಹಿಂದೆ ಗ್ರಾಪಂನಿಂದ ಕೈಗೊಂಡಿರುವ ಕಾಮಗಾರಿಗಳ ವರದಿ, ಹಿಂದಿನ ಸಭೆಯಲ್ಲಿ ಆಗಿರುವ ಪ್ರಸ್ತಾವನೆ ವರದಿಯನ್ನು ಮಂಡಿಸಬೇಕು. ಎಲ್ಲವೂ ಚರ್ಚೆಯಾದ ನಂತರ ಅವಕಾಶ ಕೊಡಿ ಎಂದರು.

ಬಳಿಕ ಅಭಿವೃದ್ಧಿ ಪ್ರಸ್ತಾವನೆ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ವರದಿ ಪಟ್ಟಿಯಲ್ಲಿರುವಂತೆ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಆಗಿಲ್ಲ. ಕಾಮಗಾರಿ ಪಟ್ಟಿಯಲ್ಲಿ ಮಾತ್ರ ಇದೆ. ಅದು ಅನುಷ್ಠಾನಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥ ಜಾಗೇನಹಳ್ಳಿ ಸುರೇಶ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಹರೀಶ್, ಅಭಿವೃದ್ಧಿ ದೃಷ್ಟಿಯಿಂದ ಕಾಮಗಾರಿಗಳ ಪ್ರಸ್ತಾವನೆ ಮಾಡಲಾಗುತ್ತದೆ. ಸರ್ಕಾರದಿಂದ ಅನುದಾನ ಬಂದಂತೆ ಕಾಮಗಾರಿಗಳಿಗೆ ತಕ್ಕಂತೆ ಕ್ರಿಯಾಯೋಜನೆ ಸಿದ್ಧಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಯೋಜನೆ, ಇಲಾಖೆಯಿಂದ ಜನರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಭರವಸೆ ಸಿಗುತ್ತದೆ. ಆದರೆ ಫಲಾನುಭವಿಗಳು ಕಚೇರಿ ಹೋದಾಗ ಅಲೆದಾಡಿಸುತ್ತಾರೆ ಯಾವುದೆ ಕೆಲಸ ಆಗುವುದಿಲ್ಲ ಎಂದು ಸ್ಥಳೀಯ ನಿವಾಸಿ ಪುಟ್ಟಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್ ಇಲಾಖೆಯ ಯೋಜನೆ ಕುರಿತಾಗಿ ಮಾಹಿತಿ ನೀಡುವ ಸಂದರ್ಭ ಮಧ್ಯಪ್ರವೇಶಿಸಿದ ಗ್ರಾಮಸ್ಥರು, ಕಾಡುಹಂದಿಯಿಂದ ಬೆಳೆ ನಾಶವಾಗುತ್ತಿದೆ. ಹಾಗಾಗಿ ಕಾಡುಹಂದಿಯನ್ನು ಹೊಡೆಯಲು ಅರಣ್ಯ ಇಲಾಖೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ತೇಗ, ಸಿಲ್ವರ್ ಬದಲಿಗೆ ನೀರಿನಾಂಶ, ಕಾಡಾನೆ, ಕಾಡು ಪ್ರಾಣಿಗಳಿಗೆ ಆಹಾರವಾಗುವಂತ ಮರಗಿಡಗಳನ್ನು ಬೆಳೆಸುವುದರಿಂದ ಕಾಡಾನೆ, ಕಾಡುಪ್ರಾಣಿಗಳು ಗ್ರಾಮದೊಳಗೆ ಬರುವುದಿಲ್ಲ ಎಂದು ಗ್ರಾಮಸ್ಥರ ಪರವಾಗಿ ಗ್ರಾ.ಪಂ.ಸದಸ್ಯ ಕಾರ್ತಿಕ್ ವಿಷಯ ಪ್ರಸ್ತಾಪಿಸಿದರು.

ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯದಿರುವವರು ಕಚೇರಿಗೆ ಬಂದು ಅಗತ್ಯ ಮಾಹಿತಿ ಪಡೆಯಬೇಕು ಎಂದು ಸೆಸ್ಕ್ ಇಂಜಿನಿಯರ್ ಸುದೀಪ್ ಮನವಿ ಮಾಡಿದರು. ಶನಿವಾರಸಂತೆ ಹೋಬಳಿಯ 6 ಗ್ರಾ.ಪಂ.ವ್ಯಾಪ್ತಿಯಲ್ಲಿ 64 ಕೆರೆಗಳನ್ನು ಒತ್ತುವರಿ ಮಾಡಿರುವ ಬಗ್ಗೆ ಮಾಹಿತಿ ಇದೆ. ಕಂದಾಯ ಇಲಾಖೆ ಸರ್ವೇ ಕಾರ್ಯ ನಡೆಸಿದ ಮೇಲೆ ಒತ್ತುವರಿಯನ್ನು ತೆರವುಗೊಳಿಸಿ ಆಯಾ ಗ್ರಾಪಂಗಳಿಗೆ ಹಸ್ತಾಂತರಲಾಗುವುದು ಎಂದು ಗ್ರಾಮ ಆಡಳಿತಾಧಿಕಾರಿ ರಜಾಕ್ ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆ ಕುರಿತು ಇಂಜಿನಿಯರ್ ಅಶೋಕ್ ಮಾಹಿತಿ ನೀಡಿದರು. ಪಶುವೈದ್ಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸತೀಶ್ ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅಧ್ಯಕ್ಷ ಎಚ್.ಡಿ.ಮನು ಮಾತನಾಡಿದರು. ಉಪಾಧ್ಯಕ್ಷೆ ಸುಮಿತ್ರಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net