ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಯಜಮಾನ ಸಜೀವ ದಹನ

FIRE
Published on

ಸುಳ್ಯ: ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ಯಜಮಾನ ಸಜೀವ ದಹನವಾಗಿ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಐವರ್ನಾಡಿನಲ್ಲಿ ಸಂಭವಿಸಿದೆ.

ಐವರ್ನಾಡಿನ ಪರ್ಲಿಕಜೆ ಸುಧಾಕರ(47) ಮೃತಪಟ್ಟವರು. ಬೆಳಗ್ಗೆ ಮನೆಯಲ್ಲಿ ಮಲಗಿದ್ದು, ಪತ್ನಿ ರಬ್ಬರ್ ಟ್ಯಾಪಿಂಗ್‌ಗೆಂದು ಹೋಗಿದ್ದರು. ಮಗಳು ಶಾಲೆಗೆ ತೆರಳಿದ್ದಳು. ಈ ಹೊತ್ತಿನಲ್ಲಿ ಬೆಂಕಿ ಮನೆಯ ಒಂದು ಪಾರ್ಶ್ವವನ್ನು ಸುಟ್ಟು ಹಾಕಿತ್ತು. ಸುಧಾಕರ ಅವರು ಸ್ವಲ್ಪ ಅಸೌಖ್ಯಕ್ಕೀಡಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಹೊರಗೆ ಓಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸ್ಥಳದಲ್ಲಿಯೇ ಬೆಂಕಿಯಲ್ಲಿ ದಹಿಸಲ್ಪಟ್ಟು ಮೃತಪಟ್ಟಿದ್ದಾರೆ. ಒಲೆ ಅಥವಾ ಮನೆಯೊಳಗೆ ಉರಿಸಿದ್ದ ದೀಪದಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net