ಬಾಳಿಗೆ ಬೆಳಕು ನೀಡುವ ಮದ್ಯವರ್ಜನ ಶಿಬಿರ

kls yoga
ಕಳಸದಲ್ಲಿ ಮದ್ಯವರ್ಜನ ಶಿಬಿರವನ್ನು ಕಲಶೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ ಉದ್ಘಾಟಿಸಿದರು. ಸದಾನಂದ ಬಂಗೇರ, ಉಷಾ, ಸುಜಯಾ, ಕೀರ್ತಿ ಜೈನ್, ಸುರೇಶ್, ಹರೀಶ್ ಇತರರಿದ್ದರು.
Published on

ಕಳಸ: ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಕುಟುಂಬವನ್ನು ಬೆಳಗಿಸುವ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮದ್ಯವರ್ಜನ ಶಿಬಿರ ಎಂದು ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸಿ.ಧರಣೇಂದ್ರ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಶುಕ್ರವಾರ ಕಳಸ ಮಹಾವೀರ ಭವನದಲ್ಲಿ ಎಂಟು ದಿನಗಳ ಕಾಲ ನಡೆಯಲಿರುವ 1808ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ವೇದಿಕೆಯಲ್ಲಿ ವೇದವಾಕ್ಯ ಹೇಳುವ ನಾವು ಮೊದಲು ಅದಕ್ಕೆ ಅರ್ಹರಾಗಿರಬೇಕು. ಜವಾಬ್ದಾರಿ ಸ್ಥಾನದಲ್ಲಿರುವ ನಾವು ನಡೆಯುವ ದಾರಿ ಸರಿ ಇದ್ದಾಗ ಮಾತ್ರ ನಮ್ಮ ಜತೆಯಲ್ಲಿ ಇರುವವರನ್ನೂ ಸರಿ ದಾರಿಯಲ್ಲಿ ನಡೆಸಬಹುದು. ನಾವು ಸಮಾಜದಲ್ಲಿ ಹೇಗಿದ್ದೇವೆ ಎನ್ನುವುದು ನಡತೆ ಗುರುತಿಸುತ್ತದೆ. ನಟ ಡಾ. ರಾಜ್‌ಕುಮಾರ್ ಅವರನ್ನು ಸಮಾಜ ಮೆಚ್ಚಿದ್ದು ಅವರ ನಡತೆಗೆ ಎಂದು ಹೇಳಿದರು.
ಕಲಶೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ ಮಾತನಾಡಿ, ಮದ್ಯವರ್ಜನ ಶಿಬಿರ ಮನೆ ಬೆಳಗುವ ಕಾರ್ಯಕ್ರಮ. ಪ್ರಪಂಚದಲ್ಲಿ ನಡೆಯುವ ಹಗರಣಗಳಿಗೆ, ಹೊಡೆದಾಟಗಳಿಗೆ ಮದ್ಯಪಾನನವೂ ಕಾರಣ ಎಂದು ಹೇಳಿದರು.
ಶಿಬಿರದಲ್ಲಿ 70 ಮಂದಿ ಭಾಗವಹಿಸಿದ್ದು, ಎಂಟು ದಿನಗಳ ಕಾಲ ಶಿಬಿರ ನಡೆಯಲಿದೆ. ಪ್ರತಿನಿತ್ಯ ವ್ಯಾಯಾಮ, ಯೋಗ, ಧ್ಯಾನ, ಸ್ವಚ್ಛತೆ, ಶ್ರಮದಾನ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮ, ಶಾರೀರಿಕ ಗುಂಪು ಚಟುವಟಿಕೆ, ಭಜನೆ ಇತರ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್, ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ್, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಸದಸ್ಯರಾದ ಸುಜಯಾ ಸದಾನಂದ, ಬ್ರಹ್ಮದೇವ, ಕೀರ್ತಿ ಜೈನ್, ಮುರಳೀಧರ ಭಟ್, ಯೋಜನಾಧಿಕಾರಿ ಸುರೇಶ್, ಮೇಲ್ವಿಚಾರಕ ಹರೀಶ್, ನಾಗರಾಜ ಕುಲಾಲ್, ರಂಗನಾಥ್ ಭಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net