

ವಿಜಯವಾಣಿ ಸುದ್ದಿಜಾಲ ಧಾರವಾಡ
ಒಂದಲ್ಲ ಎರಡಲ್ಲ ಬರೋಬ್ಬರಿ 18 ವರ್ಷಗಳ ಕಾಲ ಸಂಶೋಧನೆ ನಡೆಸಿದ 89 ವರ್ಷದ ಹಿರಿಯರೊಬ್ಬರು ಪಿಎಚ್.ಡಿ ಪದವಿ ಪಡೆಯುವ ಮೂಲಕ ಶಿಕ್ಷಣ ಸಚಿವರಿಂದ ಮೆಚ್ಚುಗೆ ಪಡೆದಿದ್ದಲ್ಲದೆ, ಯುವಕರೂ ನಾಚುವಂತೆ ಮಾಡಿದ್ದಾರೆ.
ನಗರದ ಮಾರ್ಕಂಡೇಯ ದೊಡ್ಡಮನಿ ಈ ಸಾಧನೆ ಮಾಡಿದ್ದಾರೆ. ಕರ್ನಾಟಕ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಪಿಎಚ್.ಡಿ ಪ್ರದಾನ ಮಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಹಿರಿಯರ ಸಾಧನೆ ಹೊಗಳಿದರು. ನನ್ನ ತಂದೆಗಿಂತ 2 ವರ್ಷ ಹಿರಿಯರಾದ ವ್ಯಕ್ತಿಯೊಬ್ಬರು ಪಿಎಚ್.ಡಿ ಪಡೆದಿರುವುದು ಎಲ್ಲರಿಗೂ ಸ್ಫೂರ್ತಿ. ಅವರಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರ ಎಂದು ಹಿರಿಯಜ್ಜನ ಸಾಧನೆ ಶ್ಲಾಘಿಸಿದರು.
ಕನ್ನಡ ಅಧ್ಯಯನ ಪೀಠದಲ್ಲಿ ಡಾ. ನಿಂಗಪ್ಪ ಮುದೇನೂರ ಮಾರ್ಗದರ್ಶನದಲ್ಲಿ ಶಿವಶರಣ ಡೋಹರ ಕಕ್ಕಯ್ಯ ಒಂದು ಅಧ್ಯಯನ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪಡೆದಿದ್ದಾರೆ.
ಸಂಶೋಧನೆ ಮಾಡುವಾಗ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಆದರೆ ಅವುಗಳಿಂದ ನಿರಾಶನಾಗದೆ, ಒಮ್ಮೆ ಶುರು ಮಾಡಿದ ಕೆಲಸವನ್ನು ಅರ್ಧದಲ್ಲೇ ಕೈ ಬಿಡಬಾರದು ಎಂಬ ಛಲದಿಂದ 18 ವರ್ಷ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದೆ. ಈ ಅವಧಿಯಲ್ಲಿ ನಿಮಗೆ ಪಿಎಚ್.ಡಿ ಸಿಗುವುದಿಲ್ಲ, ಈ ವಯಸ್ಸಿನಲ್ಲಿ ಇದೆಲ್ಲ ಬೇಕೆ? ಬೇಕಿದ್ದರೆ ಗೌರವ ಡಾಕ್ಟರೇಟ್ ಕೊಡಿಸೋಣ ಎಂಬ ಟೀಕಿಸಿದ್ದರು. ಆದರೆ ನಾನು ಮಾತ್ರ ಟೀಕೆಗಳಿಗೆ ಕಿವಿಗೊಡದೆ ನನ್ನ ಸಾಧನೆ ಮಾಡಿದ್ದೇನೆ.
ಸಂಶೋಧನೆ ಮಾಡಿ ಪಿಎಚ್.ಡಿ ಪಡೆದಿರುವುದು ವಿಳಂಬವಾಗಿರಬಹುದು. ಆದರೆ ನನ್ನ ಗುರಿ ಮುಟ್ಟಿದ ಖುಷಿ ಇದೆ. ಊರು ಕೇರಿ ಸುತ್ತಿ ಮಾಹಿತಿ ಪಡೆದಿದ್ದೇನೆ. ವಯಸ್ಸಾಗಿದೆ ಎಂದು ಕೂಡದೆ ಇತರ ಸಂಶೋಧನಾ ವಿದ್ಯಾರ್ಥಿಗಳಷ್ಟೇ ಶ್ರಮವಹಿಸಿದ್ದೇನೆ. ಸಾಧನೆಗೆ ಛಲ ಇದ್ದರೆ ಸಾಕು. ವಯಸ್ಸು ಎಂದಿಗೂ ಅಡ್ಡಿ ಬರುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದೇನೆ ಎನ್ನುತ್ತಾರೆ ಮಾರ್ಕಂಡೇಯ ದೊಡ್ಡಮನಿ.