

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಸಮೀಪ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡುವುದು ಸರಿಯಲ್ಲ. ಇದೊಂದು ರೈತ ವಿರೋಧಿ ಯೋಜನೆ. ಆದ್ದರಿಂದ ರಾಜ್ಯಸರ್ಕಾರ ಈ ಯೋಜನೆಯಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.
ಜಿಲ್ಲೆಯ ಹಲವು ಸಮಸ್ಯೆ ಕುರಿತು ಚರ್ಚೆ ನಡೆಸಲು ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ಬಗ್ಗೆ ಸುದೀರ್ಘವಾಗಿ ಮಾತನಾಡಲಾಯಿತು. ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘ(ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಯೋಜನೆ ಕುರಿತು ಚರ್ಚಿಸಿದರು. ಕೆಆರ್‌ಎಸ್ ಅಣೆಕಟ್ಟೆಯ ಮೇಲೆ ಸರ್ಕಾರ ನಿರಂತರ ದಾಳಿ ಮಾಡುತ್ತಿದೆ. ಡ್ಯಾಂ ಭದ್ರತೆ ಮಾಡದೆ ಅತಂತ್ರಗೊಳಿಸುವ ಯೋಜನೆಯನ್ನು ಸರ್ಕಾರ ಮಾಡುತ್ತಿದೆ. ಇದು ರೈತ ವಿರೋಧಿ, ಗ್ರಾಮ ವಿರೋಧಿ, ಪರಿಸರ ವಿರೋಧಿ ಕೃತ್ಯವಾಗಿದೆ. ಈ ದಾಳಿಯನ್ನು ಸರ್ಕಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಬೆಂಗಳೂರಿಗೆ 6ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸಭೆಯಲ್ಲಿ ಸಂಪೂರ್ಣವಾಗಿ ವಿರೋಧ ವ್ಯಕ್ತವಾಗಿದೆ. ಕೆಆರ್‌ಎಸ್‌ನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಲು ಸರ್ಕಾರ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಇದನ್ನು ಖಂಡಿಸುವುದರ ಜತೆಗೆ ಹೋರಾಟ ರೂಪಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.
ಇದಲ್ಲದೆ ಕೆಆರ್‌ಎಸ್‌ನ ಹಿನ್ನೀರಿನಲ್ಲಿ ವಿಮಾನಯಾನ ಯೋಜನೆ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದಕ್ಕೆ ರೈತರ ವಿರೋಧವಿದೆ. ಯಾವುದೇ ಕಾರಣಕ್ಕೂ ಇದನ್ನು ನಿರ್ಮಿಸಬಾರದು. ಬಡಜನರ ಬದುಕು ಹಾಳಾಗುವುದರ ಜತೆಗೆ ಪ್ರಾಣಿ ಪಕ್ಷಿಗಳಿಗೆ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು.
ವಿವಿಧ ಸಂಘಟನೆಯ ಎಚ್.ಸಿ.ಮಂಜುನಾಥ್, ಮುದ್ದೇಗೌಡ, ಪಣಕನಹಳ್ಳಿ ಬೋರಲಿಂಗೇಗೌಡ, ಫಯಾಜ್, ಕೃಷ್ಣ, ಶಿವಲಿಂಗಯ್ಯ, ದೇವೇಗೌಡ, ಕುಮಾರ್, ಕಮಲಮ್ಮ, ದೇವಿರಮ್ಮ ಇದ್ದರು.