

ಕೆ.ಆರ್.ಸಾಗರ: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನದಲ್ಲಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಜಲಾಶಯ ಹಾಗೂ ಕಾವೇರಿ ನದಿ ಪರಿಸರಕ್ಕೆ ಹಾನಿ ಉಂಟುಮಾಡುವ ಯೋಜನೆಯಾಗಿದೆ ಎಂದು ಹಿರಿಯ ಪರಿಸರವಾದಿ ಡಾ.ಎ.ಎನ್.ಯಲ್ಲಪ್ಪರೆಡ್ಡಿ ಹೇಳಿದರು.
ಬೃಂದಾವನದಲ್ಲಿ ನಿರ್ಮಾಣ ಮಾಡಲು ಉದ್ದೇಶಿರುವ ಅಮ್ಮೂಸ್‌ಮೆಂಟ್ ಪಾರ್ಕ್ ವಿರೋಧಿಸಿ ಮಂಗಳವಾರ ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿ, ಯೋಜನೆಯಿಂದ ನೀರು ಕಲುಷಿತಗೊಳ್ಳಲಿದೆ. ರೈತರರಿಗೆ ತೊಂದರೆಯಾಗುತ್ತದೆ. ಈ ಯೋಜನೆ ಕೇವಲ ಹಣವಂತರಿಗೆ ಮೋಜು-ಮಸ್ತಿ ಮಾಡುವ ಯೋಜನೆಯಾಗಿದೆ. ಅಣೆಕಟ್ಟೆ ಭದ್ರತೆ ಮುಖ್ಯವಾಗಿರುವುದರಿಂದ ಕಾವೇರಿ ನದಿ ಪಾತ್ರದ ಜನರು ಯೋಜನೆಯನ್ನು ವಿರೋಧಿಸಲು ಜಾಗೃತರಾಗಬೇಕಾಗಿದೆ ಎಂದು ಕರೆ ನೀಡಿದರು.
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷೆ ಸುನಂದಾ ಜಯರಾಮ್ ಮಾತನಾಡಿ, ಅಣೆಕಟ್ಟೆಗೆ ಪರ್ಯಾಯವಾಗಿ ಮತ್ತೊಂದು ಅಣೆಕಟ್ಟೆ ನಿರ್ಮಾಣದ ಬಗ್ಗೆ ಯೋಜನೆ ಮಾಡುವುದನ್ನು ಬಿಟ್ಟು, ಧಕ್ಕೆಯಾಗುವ ಹಾಗೂ ಪರಿಸರಕ್ಕೆ ಮಾರಕವಾಗುವ ಬೃಂದಾವನ ಮೇಲ್ದರ್ಜೆ ಹೆಸರಿನಲ್ಲಿ 2600 ಕೋಟಿ ರೂ.ವೆಚ್ಚದಲ್ಲಿ 34.5 ವರ್ಷ ಪಿ.ಪಿ.ಟಿ. ಮಾದರಿಯಲ್ಲಿ ಖಾಸಗಿಯವರಿಗೆ ಕೊಡುತ್ತಿರುವುದು ರಾಜ್ಯ ಸರ್ಕಾರದ ಪ್ರಭಾವಿ ರಾಜಕಾರಣಿಗಳ ಕಮಿಷನ್ ಆಸೆಗಾಗಿಯೇ ಹೊರತು ಬೇರೇನು ಇಲ್ಲ ಎಂದು ಹೇಳಿದರು.
ಮುಖಂಡ ಇಂಡವಾಳು ಚಂದ್ರಶೇಖರ್, ರೈತ ಸಂಘ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ, ಕನ್ನಂಬಾಡಿ ಜಗದೀಶ್, ಗ್ರಾ.ಪಂ. ಸದಸ್ಯ ಸಿ.ಮಂಜುನಾಥ್ ಮಾತನಾಡಿದರು.
ಕೆ.ಆರ್.ಸಾಗರ ಗ್ರಾ.ಪಂ. ಪ್ರಭಾರ ಅಧ್ಯಕ್ಷ ರವಿಶಂಕರೇಗೌಡ, ರೈತ ಮುಖಂಡ ಬೋರಯ್ಯ, ದಲಿತ ಸಂಘರ್ಷ ಸಮಿತಿಯ ಎಂ.ವಿ.ಕೃಷ್ಣ, ಜಯಕರ್ನಾಟಕ ಸಂಘಟನೆಯ ನಾರಾಯಣ, ಕೆ.ಆರ್.ಸಾಗರ ಗ್ರಾ.ಪಂ. ಸದಸ್ಯ ಜಯಂತಿ, ಕೆ.ರಾಜು, ನರಸಿಂಹ, ಮುಖಂಡರಾದ ಪ್ರಕಾಶ್, ಮಂಜು, ಶ್ರೀನಿವಾಸ್ ಇತರರು ಇದ್ದರು.