

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ವೇಳೆ ರಾಷ್ಟ್ರದ್ರೋಹಿ ಹೇಳಿಕೆಗಳು ನಿರಂತರವಾಗಿ ಮೊಳಗುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆಯನ್ನು ಮೊಳಕೆಯಲ್ಲಿ ಚಿವುಟಲು ರಾಜ್ಯ ಸರ್ಕಾರ ಪಂಚ ಸೂತ್ರ ತಯಾರಿ ಮಾಡಿಕೊಳ್ಳುತ್ತಿದೆ.
ಭಾನುವಾರ ಮತ್ತು ಸೋಮವಾರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದು, ಐದು ಪ್ರಮುಖ ವಿಷಯಗಳ ಬಗ್ಗೆ ಸ್ಪಷ್ಟತೆ ತಂದುಕೊಳ್ಳಲಿದ್ದಾರೆ.
ಇನ್ಮುಂದೆ ಯಾವ ವೇದಿಕೆಯಲ್ಲಿ ದೇಶದ್ರೋಹ ಹೇಳಿಕೆ ಬರುತ್ತೋ ಆ ಪ್ರತಿಭಟನೆ ಅಥವಾ ಕಾರ್ಯಕ್ರಮದ ಆಯೋಜಕರೂ ಹೊಣೆ ಎಂಬ ತೀರ್ವನಕ್ಕೆ ಬರಲು ನಿರ್ಧರಿಸಲಾಗಿದೆ. ಹೀಗೆ ಮಾಡಿದಲ್ಲಿ ಹೋರಾಟ ಆಯೋಜನೆ ಮಾಡುವ ಸಂಘಟಕರು ಹೆಚ್ಚು ಜಾಗೃತಿ ವಹಿಸಬಹುದು ಎಂಬ ಲೆಕ್ಕಾಚಾರ ಸರ್ಕಾರದ್ದು. ಹೀಗಾಗಿ ಈ ನಿರ್ದೇಶನ ಕೆಳ ಹಂತದಲ್ಲಿ ಅನುಷ್ಠಾನ ಮಾಡಲು ಸಭೆಯಲ್ಲಿ ರೂಪುರೇಷೆ ಸಿದ್ಧವಾಗಲಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಪೌರತ್ವ ಕಾಯ್ದೆ ವಿರೋಧಿ ಹೋರಾಟದ ನೆಪದಲ್ಲಿ ಯುವ ಜನರನ್ನು ಬಳಸಿಕೊಳ್ಳುವ ಸ್ವಯಂ ಸೇವಾ ಸಂಸ್ಥೆ, ಸಂಘಟನೆಗಳನ್ನು ಗುರುತಿಸುವುದು ಮತ್ತು ದೇಶದ್ರೋಹಿ ಹೇಳಿಕೆ ನೀಡುವವರ ರಕ್ಷಣೆಗೆ ನಿಲ್ಲುವವರ ಮೇಲೂ ಕಣ್ಣಿಡಲಾಗುತ್ತದೆ.
ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ಎತ್ತಿಕಟ್ಟುವ, ಪ್ರಚೋದನೆ ನೀಡುವ ಕೆಲಸ ಇತ್ತೀಚೆಗೆ ಹೆಚ್ಚಾಗಿದ್ದು, ಈ ಕಾರ್ಯದಲ್ಲಿ ತೊಡಗುವವರನ್ನು ಹತ್ತಿಕ್ಕಲು ಶಿಕ್ಷಣ ಸಂಸ್ಥೆಗಳು ಮತ್ತು ಪೊಲೀಸರ ನಡುವೆ ಆಗಬೇಕಾದ ಸಹಯೋಗದ ಬಗ್ಗೆ ಸರ್ಕಾರ ಒಂದು ನಿರ್ಧಾರಕ್ಕೆ ಬರಲಿದೆ.
ಜಾಲತಾಣದಲ್ಲಿ ದೇಶದ್ರೋಹ ಪೋಸ್ಟ್ಗಳ ಪ್ರಚಾರ ತಡೆಯಿಂದ ಒಂದಷ್ಟು ಪರಿಸ್ಥಿತಿ ನಿಭಾಯಿಸಬಹುದಾಗಿದ್ದು, ಇದರ ಮೇಲೆ ವಿಶೇಷ ಗಮನ ಹರಿಸಲು ಕೈಗೊಳ್ಳಬಹುದಾದ ಕ್ರಮ, ಸಿಎಎ ವಿರೋಧಿ ಹೋರಾಟ ಆಯೋ ಜಕತ್ವಕ್ಕೆ ಬರುತ್ತಿರುವ ವಿದೇಶಿ ಹಣಕಾಸು ಹರಿವಿನ ಬಗ್ಗೆ ಹುಡುಕಾಟ ನಡೆಸುವ ಬಗ್ಗೆ ಅಧಿಕಾರಿಗಳು ಮತ್ತು ಸರ್ಕಾರದ ನಡುವೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ಯಾವ ಕಾರಣದಿಂದ ಪಾಕಿಸ್ತಾನ್ ಜಿಂದಾಬಾದ್ ಎಂದು ಘೊಷಣೆ ಕೂಗಿದ್ದಾಳೆ ಎಂಬುದು ಗೊತ್ತಿಲ್ಲ. ಆದರೆ ಆಕೆ ಮಾಡಿರುವುದು ತಪ್ಪು. ಈಗಾಗಲೇ ಅಮೂಲ್ಯ ಮನೆಗೆ ಎಚ್.ಎಸ್.ದೊರೆಸ್ವಾಮಿ, ರವಿಕೃಷ್ಣಾ ರೆಡ್ಡಿ ಹೋಗಿ ಬಂದಿದ್ದಾರೆ. ಎಲ್ಲವನ್ನೂ ಗಮನಿಸುತ್ತಿದ್ದೇನೆ. | ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ
ಶೀಘ್ರದಲ್ಲೇ ವಾರಿಸ್ ಬಂಧನ ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಸಿಎಎ ವಿರೋಧಿ ರ್ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ವಿಚಾರ ವಾಗಿ ಎಐಎಂಐಎಂ ಪಕ್ಷದ ವಾರಿಸ್ ಯುಸೂಫ್ ಪಠಾಣ್ ವಿರುದ್ಧ ಕೇಸ್ ದಾಖಲಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಮಧ್ಯೆ, ನಾನು ಯಾವುದೇ ಜಾತಿ, ಜನಾಂಗ ಅಥವಾ ಧರ್ಮದವರ ಭಾವನೆಗಳಿಗೆ ನೋವುಂಟು ಮಾಡುವಂತೆ ಪ್ರಚೋಚನಾಕಾರಿ ಭಾಷಣ ಮಾಡಿಲ್ಲ. ಬದಲಿಗೆ ಭಾರತೀಯನಾದ ನಾನು ಎಲ್ಲರಂತೆ ಸಾತ್ವಿಕ ಕೋಪ ವ್ಯಕ್ತಪಡಿಸಿದ್ದೇನೆ ಅಷ್ಟೆ ಎಂದು ಪಠಾಣ್ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಪರ ಘೊಷಣೆ ಕೂಗಿದಾಗ ಕಾಂಗ್ರೆಸ್ನವರು ‘ಅವರು ಹುಡುಗರು ಬಿಟ್ಟುಬಿಡಿ’ ಎನ್ನುತ್ತಿದ್ದರು. ಆದರೆ, ಇದೀಗ ಅವರೇ ಅಂಥವರನ್ನು ಬಂಧಿಸಿ ಎನ್ನುತ್ತಿದ್ದಾರೆ. ಇದು ಆರ್ಎಸ್ಎಸ್ ರಾಷ್ಟ್ರೀಯತೆ ಬಗ್ಗೆ ಹೋರಾಟ, ಜಾಗೃತಿ ಮೂಡಿಸಿರುವುದರ ಪ್ರತಿಫಲ. | ಪ್ರಲ್ಹಾದ್ ಜೋಶಿ ಕೇಂದ್ರ ಸಚಿವ
ಡಿಕೆಶಿ, ಎಚ್ಡಿಕೆಗೆ ಬಿಜೆಪಿ ಗುದ್ದು
ಬೆಂಗಳೂರು: ದೇಶದ್ರೋಹಿ ಹೇಳಿಕೆ ಪ್ರಕರಣದಲ್ಲಿ ಹೇಳಿಕೆಗಳನ್ನು ಬದಲಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ರಾಜ್ಯ ಬಿಜೆಪಿ ಲೇವಡಿ ಮಾಡಿದೆ. ಸಮ ಸಂಖ್ಯೆ ದಿನ, ಬೆಸ ಸಂಖ್ಯೆ ದಿನಗಳಲ್ಲಿ ಇವರ ಹೇಳಿಕೆ ಬೇರೆಬೇರೆಯಾಗಿರುತ್ತವೆ ಎಂದು ಬಿಜೆಪಿ ಕೆಣಕಿದೆ. ಅಮೂಲ್ಯಗೆ ಮಾತನಾಡಲು ಅವಕಾಶ ಕೊಡಬೇಕಿತ್ತು ಎಂದು ಡಿಕೆಶಿ ಮೊದಲು ಹೇಳಿದ್ದರು, ಬಳಿಕ ರಾಷ್ಟ್ರದ್ರೋಹಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಇದನ್ನು ಟ್ವೀಟ್ನಲ್ಲಿ ಬಿಜೆಪಿ ಉಲ್ಲೇಖಿಸಿದೆ. ಅಮೂಲ್ಯ ವಿಚಾರವನ್ನು ದೊಡ್ಡದು ಮಾಡಿ ಬಿಜೆಪಿ ತನ್ನ ಸೋಲನ್ನು ಮುಚ್ಚಿಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಬಳಿಕ ಮತ್ತೆ ಹೇಳಿಕೆ ನೀಡಿದಾಗ ಪಾಕಿಸ್ತಾನ ಪರ ಘೋಷಣೆ ದೇಶ ವಿರೋಧಿ ಎಂದಿದ್ದರು. ಇದನ್ನೂ ಬಿಜೆಪಿ ಪ್ರಸ್ತಾಪಿಸಿ ಟೀಕಿಸಿದೆ.