

ಮಂಡ್ಯ: ಅಮೂಲ್ ಉತ್ಪನ್ನಗಳನ್ನು ರಾಜ್ಯದಲ್ಲಿ ಮಾರಾಟ ಮಾಡುವ ಮೂಲಕ ನಮ್ಮ ಅಸ್ಮಿತೆಯಾಗಿರುವ ಕೆಎಂಎಫ್ ಅನ್ನು ಮುಳುಗಿಸಲು ನಿರಂತರವಾಗಿ ಸಂಚು ನಡೆಯುತ್ತಿದೆ ಎಂದು ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೂಲ್ ಹಾಲು, ಹಾಲು ಉತ್ಪನ್ನಗಳ ಆನ್‌ಲೈನ್ ಮಾರುಕಟ್ಟೆ ಕರ್ನಾಟಕದ ನಂದಿನಿ ಹಾಲು ಮತ್ತು ಉತ್ಪನ್ನಗಳ ಮಾರುಕಟ್ಟೆ ಮೇಲೆ ನೇರವಾಗಿ ದೊಡ್ಡ ಹೊಡೆತಕ್ಕೆ ಕಾರಣವಾಗಿದೆ. ಜತೆಗೆ ಕೆಎಂಎಫ್ ಬೆಳವಣಿಗೆಗೂ ಅಡ್ಡಿಯಾಗುತ್ತಿರುವುದರಿಂದ ಅಮೂಲ್ ಅನ್ನು ತಡೆಬೇಕಾದ ಅನಿವಾರ್ಯತೆ ಇದೆ. ಗುಜರಾತಿನ ಖೇಡ ಜಿಲ್ಲಾ ಬ್ರಾೃಂಡ್ ಅಮೂಲ್ ಹಾಲು ಮತ್ತು ಉತ್ಪನ್ನಗಳನ್ನು ಕರ್ನಾಟಕದ ಮಾರುಕಟ್ಟೆಯಲ್ಲಿಯೂ ಹಾಗೂ ಆನ್‌ಲೈನ್ ಮಾರುಕಟ್ಟೆ ಮುಖಾಂತರ ಮಾರಾಟ ಮಾಡುವ ನಿರ್ಧಾರ ನಮ್ಮ ರಾಜ್ಯಕ್ಕೆ ಸಮಸ್ಯೆಯಾಗಲಿದೆ. ಜತೆಗೆ ಆನ್‌ಲೈನ್ ಮಾರಾಟದ ಹಿಂದೆ ಅನೇಕ ಹುನ್ನಾರವಿದೆ ಎಂದು ಆರೋಪಿಸಿದ್ದಾರೆ.
ಕೆಎಂಎಫ್ ವ್ಯಾಪ್ತಿಯಲ್ಲಿ 15 ಜಿಲ್ಲಾ ಹಾಲು ಒಕ್ಕೂಟಗಳಿವೆ. 15 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರು ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿ ದಿವಸ 80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹಿಂದೆ ಹಾಲು ಉತ್ಪಾದನೆ ಉಪಕಸುಬಾಗಿತ್ತು. ಆದರೀಗ ಕೃಷಿ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರತಿ ದಿವಸ ಸಾವಿರಾರು ಕೋಟಿ ರೂ ವಹಿವಾಟು ನಡೆಯುತ್ತಿದೆ. ಕೋಟ್ಯಂತರ ರೈತರ, ಕಾರ್ಮಿಕರ, ಸಾರಿಗೆ ವ್ಯವಸ್ಥೆಯ, ಹಾಲು ಮಾರಾಟಗಾರರ ಜೀವನ ನಿರ್ವಹಣೆಯಾಗುತ್ತಿದೆ. ಇತ್ತೀಚಿನ ದಶಕಗಳಲ್ಲಿ ರೈತರು ಕೃಷಿ ಕ್ಷೇತ್ರದ ಜತೆ ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಬೆಲೆಯಲ್ಲಿ ಸ್ಥಿರತೆ ಇರುತ್ತದೆ. ರೈತರು ಹಾಲು ಉತ್ಪಾದನೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ಅಮೂಲ್ ಹೆಚ್ಚಿನ ಹಾಲು ಉತ್ಪಾದಿಸುತ್ತಿದ್ದು, ಇಡೀ ರಾಷ್ಟ್ರಾದ್ಯಂತ ತನ್ನ ಮಾರುಕಟ್ಟೆ ವಿಸ್ತರಿಸಿದೆ. ಅದರಂತೆ ರಾಜ್ಯಗಳ ಹಾಲು ಉತ್ಪಾದಕ ಸಂಸ್ಥೆಗಳ ಮೇಲೆ ದಾಳಿ ಮಾಡಿ ಆರ್ಥಿಕ ನಷ್ಟಕ್ಕೆ ಕಾರಣವಾಗುವ ಮೂಲಕ ಒಕ್ಕೂಟದ ಬಾಗಿಲು ಮುಚ್ಚಿಸುವುದು ಹಾಗೂ ವಿಲೀನಗೊಳಿಸಿಕೊಳ್ಳುವ ಹುನ್ನಾರ ಮಾಡುತ್ತಿದೆ. ಆದ್ದರಿಂದ ಕೆಎಂಎಫ್ ವಿರುದ್ಧ ನಡೆಯುತ್ತಿರುವ ಹುನ್ನಾರವನ್ನು ತಡೆಯುವ ರಾಜ್ಯದ ಜನರು ಹೋರಾಟ ಮಾಡಬೇಕಿದೆ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.