

ಮಂಡ್ಯ: ಕನ್ನಡಿಗರ ಅಸ್ಮಿತೆ ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಬದಲಿಗೆ ಗುಜರಾತ್‌ನ ಅಮೂಲ್ ಉತ್ಪನ್ನಗಳನ್ನು ರಾಜ್ಯದ ಮನೆಗೆ ಮನೆ ತಲುಪಿಸುವ ಷಡ್ಯಂತ್ರ ಸದ್ದಿಲ್ಲದೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಏ.19ರಿಂದ ರಾಜ್ಯಾದ್ಯಂತ ಅಮೂಲ್ ತಿರಸ್ಕರಿಸಿ ನಂದಿನಿ ಉಳಿಸಿ ಅಭಿಯಾನ ಆಯೋಜಿಸಲಾಗುತ್ತಿದೆ ಎಂದು ಕದಂಬ ಸೈನ್ಯ ಸಂಸ್ಥಾಪಕ ಬೇಕ್ರಿ ರಮೇಶ್ ಹೇಳಿದರು.
ರಾಜ್ಯದ ರೈತರ ಪಾಲಿನ ಸಂಜೀವಿನಿ ಹಾಗೂ ಹೊರರಾಜ್ಯದಲ್ಲಿಯೂ ಅಧಿಪತ್ಯ ಸ್ಥಾಪಿಸಿರುವ ಕೆಎಂಎಫ್‌ಗೆ ಸೆಡ್ಡು ಹೊಡೆದು ಅಮೂಲ್ ಉತ್ಪನ್ನಗಳ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಹುಬ್ಬಳ್ಳಿ, ಬೆಳಗಾವಿ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬಿಡುಗಡೆ ಮಾಡಲಾಗಿದೆ. ಜತೆಗೆ ನಂದಿನಿ ಬ್ರಾೃಂಡ್ ಸಿಗದಂತೆ ಕೃತಕ ಅಭಾವ ಸೃಷ್ಟಿಸಿ ಅಮೂಲ್ ಉತ್ಪನ್ನಗಳನ್ನು ಕೊಡಲಾಗುತ್ತಿದೆ. ಇದಕ್ಕೆ ಕೆಎಂಎಫ್‌ನ ಕೆಲ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂದಿನಿ ಬ್ರಾೃಂಡ್ ಅನ್ನು ಅಮೂಲ್‌ನೊಂದಿಗೆ ವಿಲೀನ ಮಾಡುವ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಷಾ ಬಹಿರಂಗ ಸಭೆಯಲ್ಲಿಯೇ ಹೇಳಿದ್ದರು. ಆದರೆ ಅಂದು ಸಿಎಂ ಸೇರಿದಂತೆ ಸಚಿವರು ಮೌನಕ್ಕೆ ಶರಣಾದರು. ಅಮೂಲ್ ಉತ್ಪನ್ನಗಳ ಖರೀದಿ ಜನರ ಆಯ್ಕೆ ಬಿಟ್ಟ ವಿಚಾರ. ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದನ್ನು ತಡೆಯಲು ಸಾಧ್ಯವಿಲ್ಲವೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೇಜವಾಬ್ದಾರಿತನ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಸೈನ್ಯದ ಎಸ್.ಶಿವಕುಮಾರ್, ಉಮ್ಮಡಹಳ್ಳಿ ನಾಗೇಶ್, ಮೈಸೂರು ಶಿವಕುಮಾರ್, ಮಹದೇವಸ್ವಾಮಿ, ಶಿವಕುಮಾರ್ ಇದ್ದರು.