ಅಮ್ಟಾಡಿ ಸಹಕಾರಿಯಿಂದ ಶೇ.10 ಲಾಭಾಂಶ ವಿತರಣೆ

04
Published on

ಬಂಟ್ವಾಳ: ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳೆದ ಸಾಲಿನಲ್ಲಿ 277.22 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿ, 1.13 ಕೋಟಿ ರೂ. ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ.10ರಷ್ಟು ಲಾಭಾಂಶ ವಿತರಿಸುತ್ತಿದೆ ಎಂದು ಸಂಘದ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಹೇಳಿದರು.

ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚ್ ಹಾಲ್‌ನಲ್ಲಿ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಹಿರಿಯ ಸದಸ್ಯರಾದ ಪದ್ಮನಾಭ ರಾವ್, ರಾಘವನ್ ನಾಯರ್, ಮೊಂತು ಡಿಸೋಜ, ಪಿಲಿಪ್ ಮೊಂತೆರೋ, ಪ್ಲಾವಿಯಾ ಮೊಂತೆರೋ ಉದ್ಘಾಟಿಸಿದರು.

ಸಂಘದ ಸಿಇಒ ಅಜಯ್ ಕುಮಾರ್ ಅಜಿಲ ವಾರ್ಷಿಕ ವರದಿ ಮಂಡಿಸಿ, 47.85 ಕೋಟಿ ರೂ. ಠೇವಣಿ ಸಂಗ್ರಹ, 45.57 ಕೋಟಿ ರೂ. ಸಾಲ ನೀಡಿದೆ. ಸಂಘದಲ್ಲಿ 5,181 ಸದಸ್ಯರಿದ್ದು, 2.81 ಕೋಟಿ ರೂ. ಪಾಲು ಬಂಡವಾಳ, 65.24 ಕೋಟಿ ರೂ. ದುಡಿಯುವ ಬಂಡವಾಳ, 1.98 ಕೋಟಿ ರೂ. ವಿವಿಧ ನಿಧಿಗಳನ್ನು ಹೊಂದಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಲ್ಮಾ ಪ್ರಿಯ ಆಲ್ಬುಕರ್ಕ್(ಕೃಷಿ), ಜೆರಾಲ್ಡ್ ಫರ್ನಾಂಡಿಸ್ ಪೆದಮಲೆ(ಆತ್ಮರಕ್ಷಣ ಕಲೆ), ಚಂದ್ರಹಾಸ ಕಡೆಗೋಳಿ(ಕುಸ್ತಿ), ಗಣೇಶ್ ಪೂಜಾರಿ ಕುರಿಯಾಳ(ರಂಗಭೂಮಿ), ಸುಧೀರ್ ಕುಮಾರ್ ಜಾರಂದಗುಡ್ಡೆ(ಮುಖ್ಯಮಂತ್ರಿ ಚಿನ್ನದ ಪದಕ), ಡಾ.ನವೀನ್ ಶೆಟ್ಟಿ ಮುಂಡಾಜೆ ಗುತ್ತು(ವೈದ್ಯಕೀಯ), ಡಾ.ಅನಿಕೇತ್ ಪಿಂಟೋ(ವೈದ್ಯಕೀಯ), ಗೀತೇಶ್ ನೆತ್ತರಕೆರೆ(ಕ್ರೀಡೆ), ಫಿಲೋಮಿನಾ ರೋಡ್ರಿಗಸ್(ಹೈನುಗಾರಿಕೆ) ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಸಂಘದ ನಿರ್ದೇಶಕರಾದ ನರಸಿಂಹ ಹೊಳ್ಳ, ಅಲ್ವಿನ್ ವಿನಯ್ ಲೋಬೊ, ಕಮಲಾಕ್ಷ, ಯಶವಂತ ಅಡಪ, ವೀಣಾ ಡಿಸೋಜ, ಬಬಿತಾ ಕೋಟ್ಯಾನ್, ಅಡ್ವಾರ್ಡ್ ಅಲ್ವಿನ್ ಫರ್ನಾಂಡಿಸ್, ಕಮಲಾ, ತುಕಾರಾಮ, ರೋಷನ್ ಪಿಂಟೋ ಉಪಸ್ಥಿತರಿದ್ದರು.

ಸಿಬ್ಬಂದಿ ರೇಣುಕಾ ರೈ, ಅಲ್ವಿನ್ ವೇಗಸ್, ರಮ್ಯಾ, ದುರ್ಗಾಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ರಾಯಸ್ ಸಚಿನ್ ರೋಡ್ರಿಗಸ್ ಸ್ವಾಗತಿಸಿದರು. ನಿರ್ದೇಶಕ ಹರೀಶ್ ಶೆಟ್ಟಿ ಪಡು ವಂದಿಸಿದರು. ಶಾಖಾ ವ್ಯವಸ್ಥಾಪಕ ದಿನೇಶ್ ಅಮೀನ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net