

ಉಳ್ಳಾಲ: ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧಕ ಪ್ರೊ.ಅಮೃತ ಸೋಮೇಶ್ವರ(88) ವಯೋಸಹಜವಾಗಿ ಶನಿವಾರ ಬೆಳಗ್ಗೆ ಸ್ವಗೃಹ ಸೋಮೇಶ್ವರದ 'ಒಲುಮೆ'ಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ಕನ್ನಡ ಮತ್ತು ತುಳು ಭಾಷೆಯ ಉನ್ನತಿಗಾಗಿ ತನ್ನನ್ನು ಸಮರ್ಪಿಸಿಕೊಂಡಿದ್ದ ಅವರು, ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ್ದಲ್ಲದೆ ನೂರಕ್ಕೂ ಹೆಚ್ಚಿನ ಕೃತಿಗಳನ್ನು ಹೊರತಂದಿದ್ದರು.
ನಿಷ್ಠುರವಾದಿಯಾಗಿದ್ದ ಅಮೃತ ಸೋಮೇಶ್ವರ, ಕನ್ನಡ ಸಾಹಿತ್ಯದ ವಿವಿಧ ವಿಭಾಗಗಳಾದ ಕಥೆ, ಸಾಹಿತ್ಯ, ಕವನ, ಸಣ್ಣ ಕಥೆ, ಕಾದಂಬರಿ, ನಾಟಕ, ವ್ಯಕ್ತಿ ಚಿತ್ರಣ, ಜನಾಂಗದ ಪರಿಚಯ, ಸಾಹಿತ್ಯ ಪರಿಚಯ, ರೇಡಿಯೋ ರೂಪಕ, ನೃತ್ಯರೂಪಕ, ಸ್ವತಂತ್ರ ಗಾದೆ, ಶಬ್ಧ ಕೋಶ, ಸಂಸ್ಕೃತಿ ಚಿಂತನ, ವಚನ ಸಾಹಿತ್ಯ, ಕುಚೋದ್ಯ ಕೋಶ, ಅಂಕಣ ಲೇಖನ, ನವಸಾಕ್ಷರರಿಗೆ ಸಾಹಿತ್ಯ, ಯಕ್ಷಗಾನ ವಿಚಾರ ವಿಮರ್ಶೆ, ಸಂಪಾದನೆ, ಸಹ ಸಂಪಾದಿತ ಕೃತಿಗಳನ್ನು ಹೊರತಂದಿದ್ದರು.
ತುಳುವಿನಲ್ಲಿ ಕವನ ಸಂಗ್ರಹ, ಪಾಡ್ದನ ಸಂಗ್ರಹ, ನಾಟಕ, ಅನುವಾದಿತ ಕಾವ್ಯ, ನೃತ್ಯ ರೂಪಕ, ರೇಡಿಯೋ ರೂಪಕ, ಅನುವಾದಿತ ನಾಟಕ, ತುಳು ಜಾನಪದ ಕುರಿತಾದ ಸಂಶೋಧನೆ, ಸ್ವತಂತ್ರ ಗಾದೆ, ಭಕ್ತಿಗೀತೆ, ಭಾವಗೀತೆಗಳ ಕೃತಿಗಳನ್ನು ಹೊರತಂದಿದ್ದರು.
ಸಾವಿರಾರು ಶಿಷ್ಯರನ್ನು ಹೊಂದಿದ್ದ ಅವರು, ಶಿಸ್ತಿನ ಪ್ರಾಧ್ಯಾಪಕರಾಗಿದ್ದರು. ನೂರಾರು ಮಂದಿಗೆ ಕಲೆ, ಸಾಹಿತ್ಯ, ಸಂಶೋಧನಾ ಆಸಕ್ತರಿಗೆ ಸದಾಕಾಲ ಪ್ರೇರಕರು, ಮಾರ್ಗದರ್ಶಕರಾಗಿದ್ದರು. ಅವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ 'ಗೌರವಶ್ರೀ' ಪ್ರಶಸ್ತಿ, ಮಣಿಪಾಲ ಅಕಾಡೆಮಿಯ ಮಾಹೆ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿಗಳು, ಸಂಘ-ಸಂಸ್ಥೆಗಳಿಂದ ಸನ್ಮಾನ ಪಡೆದಿದ್ದರು.
ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗಾಗಿ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಅವರ ರಚನೆಯ 'ಮಾನವತೆ ಗೆದ್ದಾಗ' ಎಂಬ ಕೃತಿಗೆ ಅವರ ಜೀವನ ಮಾದರಿಗೆ ಸಾಕ್ಷಿಯಾಗಿದೆ. ಕೆಲವು ವರ್ಷಗಳಿಂದ ಆರೋಗ್ಯ ಕೈಕೊಟ್ಟಿದ್ದರಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅವರ ಮನೆಯಲ್ಲೇ ನಡೆಯುತ್ತಿದ್ದವು.
'ತಂಬಿಲಾ' ಮತ್ತು 'ರಂಗಿತಾ' ಸಹಿತ ಏಳು ತುಳು ನಾಟಕಗಳನ್ನು ಬರೆದಿದ್ದಾರೆ.
ಮನೆ ಭಾಷೆ ಮಲಯಾಳಂ ಆಗಿದ್ದರೂ ಕನ್ನಡ, ತುಳು, ಸಾಹಿತ್ಯದಲ್ಲಿ ಕೃಷಿ ಮಾಡಿದ್ದು ಕನ್ನಡದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು. ಸೋಮೇಶ್ವರ ಪುರಸಭೆ ಕಚೇರಿಯ ಮುಂಭಾಗದಲ್ಲಿರುವ ಸ್ವಗೃಹದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ.