

ವಿಜಯವಾಣಿ ಸುದ್ದಿಜಾಲ ಉಡುಪಿ
ಶಿಕ್ಷಣದೊಂದಿಗೆ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ ಹೀಗೆ ಹಲವು ಮುಖಗಳಿಂದ ಎಂಜಿಎಂ ಕಾಲೇಜು ಅಭೂತಪೂರ್ವ ಕೊಡುಗೆ ನೀಡುತ್ತಿದೆ. ಡಾ. ಟಿಎಂಎ ಪೈ ಅವರ ಕನಸನ್ನು ಮೀರಿ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳಿಗೆ ದೊಡ್ಡ ಲಾಭವಾಗಿದೆ. ನಾಡಿನ ಈ ಹೆಮ್ಮೆಯ ಶಿಕ್ಷಣ ಸಂಸ್ಥೆಯು ಶ್ರೀಕೃಷ್ಣನ ಅನುಗ್ರಹದಿಂದ ಸಮಾಜಕ್ಕೆ ವರದಾನವಾಗಿ ಪರಿಣಮಿಸಲಿ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.
ಎಂಜಿಎಂ ಕಾಲೇಜು ಟ್ರಸ್ಟ್ನ ಅಧ್ಯಕ್ಷ ಟಿ. ಸತೀಶ್ ಯು. ಪೈ ಅಧ್ಯಕ್ಷತೆ ವಹಿಸಿದ್ದರು. ಮಾಹೆಯ ಸಹಕುಲಪತಿ ನಾರಾಯಣ ಸಭಾಹಿತ, ಸಿಎ ಬಿ.ಪಿ. ವರದರಾಜ ಪೈ, ಪಿಯು ವಿಭಾಗದ ಪಿಟಿಎ ಅಧ್ಯಕ್ಷ ವಿಜಯ್ ಸಿಕ್ವೇರಾ, ಪಿಟಿಎ ಪದವಿ ವಿಭಾಗದ ಅಧ್ಯಕ್ಷ ವಿನಾಯಕ ಕಿಣಿ, ಹಳೆಯ ವಿದ್ಯಾರ್ಥಿ ಸಂದ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ, ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಜಗದೀಶ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಶ್ರೀಶ ಆಚಾರ್ಯ, ಟಿ.ರಂಗ ಪೈ, ಪಿಯು ಕಾಲೇಜ್ ಪ್ರಾಂಶುಪಾಲೆ ಮಾಲತಿದೇವಿ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ದೇವಿದಾಸ್ ಎಸ್. ನಾಯಕ್ ಇತರರು ಉಪಸ್ಥಿತರಿದ್ದರು.
ಕಾಲೇಜ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಸ್ವಾಗತಿಸಿದರು. ಡಾ. ಎಂ.ವಿಶ್ವನಾಥ್ ಪೈ ವಂದಿಸಿದರು. ಸುಚಿತ್ ಕೋಟ್ಯಾನ್ ಹಾಗೂ ರೋಹಿಣಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಅಮೃತ ಮಹೋತ್ಸವದ ನಿಮಿತ್ತ ಬೆಳಗಿನ ಅವಧಿಯಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ವಸ್ತು ಪ್ರದರ್ಶನ ಗಮನ ಸೆಳೆಯಿತು.
ದೇಶದ ಉನ್ನತ ಸಂಸ್ಥೆಯೊಂದರ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಹೆಮ್ಮೆಯಾಗಿದೆ. ಎಂಜಿಎಂ ಸಂಸ್ಥೆ ಇಂದು ಈ ಮಟ್ಟದಲ್ಲಿ ಬೆಳೆಯಲು ಶ್ರಮಿಸಿದ ಸಂಸ್ಥಾಪಕರಿಂದ ಹಿಡಿದು ಈವರೆಗಿನ ಎಲ್ಲರಿಗೂ ವಂದಿಸುತ್ತೇನೆ. ಸಂಸ್ಥೆಯೆಂದರೆ ಅದು ಬರಿಯ ಕಟ್ಟಡವಲ್ಲ, ಮಕ್ಕಳ ಭವಿಷ್ಯ ರೂಪಿಸುವ ಜ್ಞಾನಾಲಯ. ವಿದ್ಯಾರ್ಥಿಗಳು ದೇಶದ ಹೆಸರು, ಕೀರ್ತಿ ಬೆಳಗಿಸುವ ನಾಯಕತ್ವ ಬೆಳೆಸಿಕೊಳ್ಳಬೇಕು. | ಲೆ.ಜ. ಡಾ. ಎಂ.ಡಿ. ವೆಂಕಟೇಶ್. ಮಾಹೆ ಉಪಕುಲಪತಿ