

ಶ್ರವಣ್‌ಕುಮಾರ್ ನಾಳ ಪುತ್ತೂರು
ಜಿಲ್ಲೆಯ ಎರಡನೇ ಅತೀ ದೊಡ್ಡ ಪಟ್ಟಣ ಪುತ್ತೂರು ನಗರವನ್ನು ಯೋಜನಾ ಬದ್ಧವಾಗಿ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರದ ಅಮೃತ್ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ಮಂಗಳೂರು ಸ್ಮಾರ್ಟ್‌ಸಿಟಿಯಂತೆ ಪುತ್ತೂರನ್ನು ಮಾದರಿ ನಗರವನ್ನಾಗಿ ರೂಪಿಸಲು ಸಿದ್ಧತೆ ನಡೆಸಿದ್ದು, ನಗರೀಕರಣ, ಪ್ರವಾಸೋದ್ಯಮ, ಐತಿಹಾಸಿಕ ತಾಣ, ಪುರಾತನ ಸ್ಮಾರಕಗಳ ರಕ್ಷಣೆಗೆ ಒತ್ತು ನೀಡಲಾಗುತ್ತಿದೆ.
ಪುತ್ತೂರಿಗೆ ಜಿಲ್ಲಾ ಕೇಂದ್ರವಾಗುವ ಅರ್ಹತೆಯಿದ್ದು, ಭವಿಷ್ಯತ್ತಿನಲ್ಲಿ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕುಗಳನ್ನು ಪೂರ್ತಿಯಾಗಿ, ಬಂಟ್ವಾಳ ತಾಲೂಕನ್ನು ಭಾಗಶಃ ಸೇರಿಸಿ ಪುತ್ತೂರು ಕೇಂದ್ರವಾಗಿರಿಸಿಕೊಂಡು ಹೊಸ ಜಿಲ್ಲೆ ರಚಿಸುವ ಮುಂದಾಲೋಚನೆಯಿಂದ ನಗರೀಕರಣ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ. ರಾಮನಗರ, ಯಾದಗಿರಿ, ಚಿಕ್ಕಬಳ್ಳಾಪುರ ಮುಂತಾದ ಪ್ರದೇಶಗಳು ಜಿಲ್ಲೆಗಳಾಗಿವೆ. ಆ ಜಿಲ್ಲೆಗಳಿಗಿಂತ ಪ್ರಸ್ತಾವಿತ ಪುತ್ತೂರು ಜಿಲ್ಲೆಯ ವಿಸ್ತೀರ್ಣ ಮತ್ತು ಜನಸಂಖ್ಯೆ ಅಧಿಕವಾಗಿದೆ. ಹೀಗಾಗಿ ಇದನ್ನೇ ನೆಪವಾಗಿಸಿರಿ ಮೊದಲ ಹಂತದಲ್ಲಿ ಪುತ್ತೂರು ನಗರ ಅಭಿವೃದ್ಧಿಗೊಳಿಸಿ ಜಿಲ್ಲಾ ಕೇಂದ್ರವಾಗಿ ರೂಪಿಸುವುದು ನಗರಸಭೆಯ ಯೋಜನೆ.
ರಿಂಗ್‌ರೋಡ್, ವಿಸ್ತರಣೆ
ನಗರದ ಪ್ರಮುಖ ಸ್ಥಳಗಳಿಗೆ ಟ್ರಾಫಿಕ್ ರಹಿತ ಸಂಪರ್ಕಕ್ಕೆ ಪ್ರಸ್ತುತ ಇರುವ ರಸ್ತೆಯನ್ನೇ ಮೇಲ್ದರ್ಜೆಗೇರಿಸಿ ವಿಸ್ತರಿಸುವುದು, ಸಮರ್ಪಕ ಹಾಗೂ ಸುಸಜ್ಜಿತ ಒಳಚರಂಡಿ ವ್ಯವಸ್ಥೆ, ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ ಮೇಲ್ದರ್ಜೆಗೇರಿಸುವುದು, ಬಿರುಮಲೆ ಬೆಟ್ಟ, ಬಾಲವನ ಅಭಿವೃದ್ಧಿ, ರಸ್ತೆ ಸಂಪರ್ಕ ವ್ಯವಸ್ಥೆ, ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿಗಾಗಿ ಕೈಗಾರಿಕಾ ವಲಯ ಅಭಿವೃದ್ಧಿ ಸೇರಿ ವಿವಿಧ ಯೋಜನೆಗಳನ್ನು ಗಮನದಲ್ಲಿರಿಸಿ ಅಮೃತ್ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ವಿಜಯವಾಣಿಗೆ ತಿಳಿಸಿದ್ದಾರೆ.
ಎಜುಕೇಷನ್ ಹಬ್ ನಿರ್ಮಾಣ
ವಿವೇಕಾನಂದ, ಅಂಬಿಕಾ ವಿದ್ಯಾಸಂಸ್ಥೆ, ಫಿಲೋಮಿನಾ, ರಾಮಕೃಷ್ಣ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿಗೊಳ್ಳುತ್ತಿದ್ದು, ಭವಿಷ್ಯದಲ್ಲಿ ಪುತ್ತೂರನ್ನು ಎಜುಕೇಷನ್ ಹಬ್ ಆಗಿ ರೂಪುಗೊಳಿಸಲು ಅಮೃತ್ ಯೋಜನೆ ಹೆಚ್ಚು ಅನುಕೂಲ.
ಮಂಗಳೂರು ಸ್ಮಾರ್ಟ್‌ಸಿಟಿಯಂತೆ ಪುತ್ತೂರನ್ನು ಮಾದರಿ ನಗರವನ್ನಾಗಿ ರೂಪಿಸಲು ಅಮೃತ್ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಮಗ್ರ ಯೋಜನೆ ರೂಪಿಸಲಾಗುವುದು.
ಜೀವಂಧರ್ ಜೈನ್, ಪುತ್ತೂರು ನಗರಸಭಾ ಅಧ್ಯಕ್ಷ