

ಮಡಿಕೇರಿ:
ಕಾವೇರಿ ತವರು ಕೊಡಗಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ಪಟ್ಟಣಗಳಲ್ಲಿ ಅಮೃತ್-2 ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಮಧ್ಯೆಯೇ ಈ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರನ್ನು ಹೈರಾಣಾಗಿಸಿದೆ. ಮೊದಲೇ ಗುಂಡಿಬಿದ್ದ ರಸ್ತೆಗಳಿಂದ ಪರಿಪಾಟಲು ಪಡುತ್ತಿರುವ ಜನರು ಇದೀಗ ನಡೆಯುತ್ತಿರುವ ಅಮೃತ್-2 ಯೋಜನೆಯ ಅಸಮರ್ಪಕ ಕಾಮಗಾರಿಯಿಂದ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ.
ನಿರಂತರ ಕುಡಿಯುವ ನೀರು ಪೂರೈಕೆಗಾಗಾಗಿ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ, ಕುಶಾಲನಗರ ಹಾಗೂ ವಿರಾಜಪೇಟೆಯಲ್ಲಿ ಅಮೃತ್-2 ಯೋಜನೆ ಅಡಿಯಲ್ಲಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಜಲಮೂಲದಿಂದ ಮುಖ್ಯ ಪೈಪ್ ಅಳವಡಿಕೆ, ನಗರ ಪ್ರದೇಶದಲ್ಲಿ ಮನೆ ಮನೆಗೆ ಸಂಪರ್ಕ ಕಲ್ಪಿಸಲು ಅಗತ್ಯವಿರುವ ಪೈಪ್‌ಗಳ ಅಳವಡಿಕೆ ಕಾರ್ಯ ಮುಂದುವರಿದಿದೆ. ಜಿಲ್ಲೆಯ ಪ್ರಮುಖ ಪಟ್ಟಣಗಳಿಗೆ ತೀರ ಅಗತ್ಯವಾಗಿರುವ ಇಂಥದ್ದೊAದು ಯೋಜನೆ ಅಗತ್ಯತೆ ಬಗ್ಗೆ ಯಾರಿಗೂ ತಕರಾರು ಇಲ್ಲ. ಆದರೆ ಕಾಮಗಾರಿ ನಡೆಸಲಾಗುತ್ತಿರುವ ಸಮಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಜಿಲ್ಲೆಯಲ್ಲಿ ಮೇ ಕೊನೆಯ ವಾರದಿಂದಲೇ ಮಳೆಯ ಅಬ್ಬರ ಶುರುವಾಗಿದೆ. ಇದೀಗ ಜುಲೈನಲ್ಲೂ ಕುಶಾಲನಗರ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಜೋರು ಮಳೆ ಆಗುತ್ತಿದೆ. ಈ ಮಳೆಯಲ್ಲೇ ಅಮೃತ್-2 ಯೋಜನೆಗೆ ಸಂಬAಧಿಸಿದAತೆ ಪೈಪ್ ಅಳವಡಿಕೆ ಕಾರ್ಯ ಮುಂದುವರಿದಿದೆ. ಇದಕ್ಕಾಗಿ ರಸ್ತೆ ಮತ್ತು ರಸ್ತೆ ಬದಿಯಲ್ಲಿ ಯಂತ್ರಗಳನ್ನು ಬಳಸಿ ಅಗೆಯಲಾಗುತ್ತಿದೆ. ಪೈಪ್ ಅಳವಡಿಸಿದ ನಂತರ ಸರಿಯಾಗಿ ಮಣ್ಣು ಮುಚ್ಚದ ಕಾರಣ ಸಮಸ್ಯೆ ಆಗುತ್ತಿದೆ. ಸಮರ್ಪಕವಾಗಿ ಮಣ್ಣು ಮುಚ್ಚಿದರೂ ಸುರಿಯುವ ಮಳೆಗೆ ಅಲ್ಲಿ ಗುಂಡಿ ಬೀಳುತ್ತಿದೆ.
ಅಮೃತ್-2 ಅಸಮರ್ಪಕ ಕಾಮಗಾರಿಯಿಂದಾಗಿ ಸರಿಯಾಗಿ ಗುಂಡಿಗಳನ್ನು ಮುಚ್ಚದಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಕಾರು, ಬೈಕ್ ಸೇರಿದಂತೆ ವಾಹನಗಳು ಮಣ್ಣಿನಲ್ಲಿ ಸಿಲುಕಿ ಹೊರತೆಗೆಯಲು ಪರದಾಡುವುದು ಸಾಮಾನ್ಯ ದೃಶ್ಯವಾಗಿದೆ. ನಿಯಮದ ಪ್ರಕಾರ ಗುಂಡಿ ಅಗೆದ ಮೇಲೆ ಮಣ್ಣು ಮುಚ್ಚು ಅದರ ಮೇಲೆ ಡಾಂಬರು ಅಥವಾ ಕಾಂಕ್ರಿಟ್ ಹಾಕಬೇಕು. ಆದರೆ, ಡಾಂಬರು ಹಾಕುವುದು ಇರಲಿ ಕನಿಷ್ಠ ಪಕ್ಷ ಗುಂಡಿಯನ್ನು ಸರಿಯಾಗಿ ಮುಚ್ಚುವುದು ಕೂಡ ಇಲ್ಲ. ಮಳೆ ನಿರಂತರವಾಗಿ ಬೀಳುತ್ತಲೇ ಇರುವುದರಿಂದ ಗುಂಡಿಗಳು ಹಳ್ಳ ಬೀಳುತ್ತಿದೆ. ಮಣ್ಣು ಇನ್ನಷ್ಟು ಕೆಳಕ್ಕೆ ಕುಸಿಯುತ್ತಿದೆ. ಇದರಿಂದ ವಾಹನಗಳ ಚಕ್ರಗಳು ಅವುಗಳಲ್ಲಿ ಸಿಲುಕುವಂತಾಗಿದೆ.
ಪ್ರಮುಖವಾಗಿ ಮಳೆ ಹೆಚ್ಚು ಬೀಳುವ ಮಡಿಕೇರಿಯಲ್ಲಿ ದೊಡ್ಡ ಮಟ್ಟದ ಸಮಸ್ಯೆ ಆಗುತ್ತಿದೆ. ನಗರದ ಟಿ. ಜಾನ್ ಬಡಾವಣೆ ಸೇರಿದಂತೆ ಬಹುತೇಕ ಭಾಗಳಲ್ಲಿ ಈ ಸಮಸ್ಯೆ ಸಾಮಾನ್ಯ ಎಂಬAತೆ ಆಗಿದೆ. ವಾಹನಗಳು ಹೂತು ಹೋಗುವ ಸಂಭಾವ್ಯ ಸ್ಥಳಗಳಲ್ಲಿ ಸ್ಥಳೀಯರೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ವಾಹನ ಚಾಲಕರಿಗೆ ನೆರವಾಗಿದ್ದಾರೆ. ಆದರೂ ಸಂಬAಧಿಸಿದ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬAಧವೇ ಇಲ್ಲವೇನೋ ಎಂಬAತೆ ಇದ್ದಾರೆ ಎನ್ನುವ ಆರೋಪ ಜನರಿಂದ ಕೇಳಿ ಬರುತ್ತಿದೆ. ಒಳಚರಂಡಿ ಮಂಡಳಿ ಅಧಿಕಾರಿಗಳ ಈ ವರ್ತನೆ ಜನಪ್ರತಿನಿಧಿಗಳೂ ಕೋಪ ತರಿಸಿದೆ.
ಪೈಪ್ ಲೈನ್ ಅಳವಡಿಸಲು ಈಚೆಗೆ ಮಾಡಿದ ಹೊಸ ರಸ್ತೆಗಳು, ಇತ್ತೀಚೆಗೆ ಡಾಂಬರೀಕರಣ ಮಾಡಿದ ರಸ್ತೆಗಳು, ಕಾಂಕ್ರೀಟಿಕರಣಗೊAಡ ರಸ್ತೆಗಳನ್ನೂ ಬಿಡದೇ ಅಗೆಯಲಾಗಿದೆ. ಸಿಗುವ ಸೀಮಿತ ಅನುದಾನವನ್ನು ಕಷ್ಟಪಟ್ಟು ತಂದು ರಸ್ತೆ ಮಾಡಿಸಿದ ನಂತರ ಈಗ ಬಂದಿರುವ ಸ್ಥಿತಿ ನೋಡಿ ಆಯಾಯಾ ವಾಡ್‌ಗಳ ಸದಸ್ಯರು ಸಿಟ್ಟಾಗಿದ್ದಾರೆ. ಈಚೆಗೆ ನಡೆದ ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿದ್ದು, ಪಕ್ಷಬೇಧ ಮರೆತು ಈ ಕಾಮಗಾರಿ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಂಡಿದ್ದರು.
ಕೊಡಗಿನ ಮಳೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾಹಿತಿ ಇದೆ. ಆದರೂ ಇಂಥ ಕಾಮಗಾರಿಯನ್ನು ಮಳೆಗಾಲ ಶುರುವಾಗುವ ಮೊದಲೇ ಪೂರ್ಣಗೊಳಿಸುವ ಬದಲು ಸುರಿಯುತ್ತಿರುವ ಮಳೆಯಲ್ಲೂ ಮುಂದುವರಿಸಿರುವುದರಿAದ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದೆ. ಮಳೆ ಶುರುವಾಗುವ ಮೊದಲೇ ಪೈಪ್ ಲೈನ್ ಅಳವಡಿಕೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಕಾಲಮಿತಿ ನಿಗದಿ ಮಾಡಿದ್ದರೆ ಇಂದು ಈ ಸಮಸ್ಯೆ ಇರುತ್ತಿರಲಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಮಳೆ ನಿಲ್ಲುವ ತನಕ ಕಾಮಗಾರಿಗಳಿಗೆ ಬಿಡುವು ಕೊಟ್ಟು ನಂತರ ಮುಂದುವರಿಸುವAತೆಯೂ ಒತ್ತಾಯ ಕೇಳಿ ಬರುತ್ತಿದೆ.
ಬೇರೆ ಊರುಗಳಿಗೂ ಮಡಿಕೇರಿಗೂ ಸಾಕಷ್ಟು ವ್ಯತ್ಯಾಸ ಇದೆ. ಇಲ್ಲಿ ಕಾಮಗಾರಿ ನಡೆಸುವ ಸಂದರ್ಭ ಮಳೆಗಾಲವನ್ನು ಗಮನದಲ್ಲಿ ಇಟ್ಟುಕೊಳ್ಳದಿದ್ದರೆ ಸಮಸ್ಯೆ ತಪ್ಪಿದಲ್ಲ ಎನ್ನುತ್ತಾರೆ ಆಟೋ ಚಾಲಕರ ಸಂಘಟನೆ ಪ್ರಮುಖರು. ರಸ್ತೆ ಅಗೆದು ಪೈಪ್ ಹಾಕುವ ಕೆಲಸವನ್ನು ಬೇಗನೇ ಆರಂಭಿಸಿ, ಮಳೆಗಾಲಕ್ಕೂ ಮೊದಲೇ ಮುಗಿಸಬೇಕಿತ್ತು. ಈಗ ಮಳೆ ಸುರಿಯುತ್ತಿರುವುದರಿಂದ ಎಲ್ಲೆಂದರಲ್ಲಿ ವಾಹನಗಳ ಚಕ್ರಗಳು ಹೂತು ಹೋಗುತ್ತಿವೆ. ಆಟೋ ಚಾಲಕರಿಗೂ ಇಂಥ ಗುಂಡಿಗಳಿAದ ಸಮಸ್ಯೆಯಾಗುತ್ತಿದೆ. ಈ ವಿಷಯವನ್ನು ಈಗಾಗಲೇ ಮಡಿಕೇರಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಗಮನಕ್ಕೆ ತರಲಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಆಟೋ ಚಾಲಕರು, ಟ್ಯಾಕ್ಸಿ ಚಾಲಕರ ಸಂಘಟನೆ ಪ್ರಮುಖರು ಕೊಟ್ಟಿದ್ದಾರೆ.
ಮಡಿಕೇರಿಯಲ್ಲಿ ಒಟ್ಟು 47 ಕೋಟಿ ರೂ. ವೆಚ್ಚದಲ್ಲಿ ಅಮೃತ್-2 ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ. 7,917 ಮನೆಗಳಿಗೆ ನೀರಿನ ಸಂಪರ್ಕ ಕೊಡುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ 125 ಕಿ.ಮೀ. ಪೈಪ್ ಲೈನ್ ಅಳವಡಿಕೆ ಮಾಡಲಾಗುತ್ತಿದೆ. ಇಲ್ಲಿಯ ತನಕ 40 ಕಿ.ಮೀ. ಪೈಪ್ ಲೈನ್ ಅಳವಡಿಕೆ ಆಗಿದೆ. 2024ರಲ್ಲಿ ಕಾಮಗಾರಿ ಆರಂಭವಾಗಿದ್ದು ಕಾಮಗಾರಿಗೆ 18 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಮಡಿಕೇರಿ ಮತ್ತು ಕುಶಾಲನಗರದಲ್ಲಿ ಈ ಹಿಂದೆ ಒಳಚರಂಡಿ ಕಾಮಗಾರಿ ನಡೆದಿದ್ದು ಅದಿನ್ನು ಪರಿಪೂರ್ಣ ಆಗಿಲ್ಲ. ಈ ಬಗ್ಗೆ ಕುಶಾಲನಗರ ಪುರಸಭೆ ಮತ್ತು ಮಡಿಕೇರಿ ನಗರಸಭೆ ಸಾಮಾನ್ಯ ಸಭೆಗಳಲ್ಲಿ ಹಲವು ಬಾರಿ ಚರ್ಚೆ ಆಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಅಮೃತ್-2 ಯೋಜನೆ ಈ ರೀತಿ ಆಗದೇ ನಿಗದಿತ ಕಾಲಮಿತಿಯೊಳಗೆ ಅನುಷ್ಠಾನಕ್ಕೆ ಬಂದು ಜನರಿಗೆ ಆಗುತ್ತಿರುವ ಅನಾನುಕೂಲ ತಪ್ಪಲಿ ಎನ್ನುವುದು ಸ್ಥಳೀಯರ ಆಶಯ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಅಮೃತ್-2 ಯೋಜನೆ ಮಡಿಕೇರಿಯಲ್ಲೂ ಅನುಷ್ಠಾನಗೊಳ್ಳುತ್ತಿದೆ. ನೀರಿನ ಪೈಪ್ ಅಳವಡಿಕೆಗಾಗಿ ನಡೆಯುತ್ತಿರುವ ಕಾಮಗಾರಿ ವೇಳೆ ತೆಗೆದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ ಜನಸಾಮಾನ್ಯರಿಗೆ ಸಮಸ್ಯೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಈ ಕುರಿತು ಮಡಿಕೇರಿ ನಗರಸಭೆ ವತಿಯಿಂದ 2 ಪತ್ರಗಳನ್ನು ಸಂಬAಧಿಸಿದವರಿಗೆ ಬರೆಯಲಾಗಿದೆ. ಗುಂಡಿ ತೆಗೆಯುವ ಮುಂಚೆ ಹೇಗಿತ್ತೋ ಹಾಗೆ ಮತ್ತೆ ಸರಿಮಾಡುವುದು ಅವರ ಜವಾಬ್ದಾರಿ.
ಎಚ್.ಆರ್. ರಮೇಶ್, ಪೌರಾಯುಕ್ತ, ಮಡಿಕೇರಿ ನಗರಸಭೆ
ಅಮೃತ್ 2 ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಪೈಪ್ ಅಳವಡಿಕೆ ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡದೇ ಇರುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಗುಂಡಿಗಳನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ವಾಹನಗಳ ಚಕ್ರಗಳು ಗುಂಡಿಗಳಲ್ಲಿ ಹೂತು ಹೋಗುತ್ತಿದೆ. ಚಕ್ರವನ್ನು ಗುಂಡಿಯಿAದ ಮೇಲೆತ್ತುವಷ್ಟರಲ್ಲಿ ವಾಹನಗಳ ಮಾಲೀಕರು ಹೈರಣಾಗುತ್ತಿದ್ದಾರೆ. ನಡೆದಾಡುವ ಜನಸಾಮಾನ್ಯರ ಪಾಡೂ ಹೇಳತೀರದಂತಾಗಿದೆ. ಜನರಿಗೆ ಇದೇ ರೀತಿ ತೊಂದರೆ ಮುಂದುವರೆದರೆ ಜನರ ಪರವಾಗಿ ಪ್ರತಿಭಟನೆ ಮಾಡಲೂ ಹಿಂಜರಿಯುವುದಿಲ್ಲ
ಕೆ.ಎಸ್. ರಮೇಶ್, ನಗರಸಭೆ ಸದಸ್ಯ, ಮಡಿಕೇರಿ
ಅಮೃತ್-2 ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಜನ ಸಾಮಾನ್ಯರಿಗೆ ಸಮಸ್ಯೆ ಆಗುತ್ತಿದೆ. ಹಾಗಾಗಿ ನೀರಿನ ಪೈಪ್ ಅಳವಡಿಕೆಗೆ ತೆಗೆದಿರುವ ಗುಂಡಿಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚಿ ಅದರ ಮೇಲೆ ವೆಟ್‌ಮಿಕ್ಸ್ ಮತ್ತು ಕಾಂಕ್ರೀಟ್ ಹಾಕಬೇಕು ಎಂಬ ಸೂಚನೆ ಸಂಬAಧಿಸಿದವರಿಗೆ ಈಗಾಗಲೇ ನೀಡಲಾಗಿದೆ. ಮಳೆ ಸುರಿಯುತ್ತಿರುವುದರಿಂದ ಮಳೆಗಾಲ ಮುಗಿಯುವವರೆಗೂ ಹೊಸದಾಗಿ ಗುಂಡಿಗಳನ್ನು ತೆಗೆಯಬಾರದು ಎಂಬ ನಿರ್ದೇಶನವನ್ನೂ ನೀಡಲಾಗಿದೆ.
ಮಹೇಶ್ ಜೈನಿ, ಉಪಾಧ್ಯಕ್ಷ, ಮಡಿಕೇರಿ ನಗರಸಭೆ