

ರಬಕವಿ/ಬನಹಟ್ಟಿ: ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸಂಬಂಧಿಸಿದಂತೆ ಇದೀಗ ರಬಕವಿಯಲ್ಲಿ ಸುಮಾರು 44 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಸ್ಪಷ್ಟ ಮಾಹಿತಿ ಹಾಗೂ ದೂರದೃಷ್ಟಿಯಿಲ್ಲದ ಕಾರಣ ತಕ್ಷಣ ಸ್ಥಗಿತಗೊಳಿಸುವಂತೆ ನಗರಸಭಾ ಪೌರಾಯುಕ್ತ ಜಗದೀಶ ಈಟಿಗೆ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ ಬುದ್ನಿ, ಸದಸ್ಯ ಯಲ್ಲಪ್ಪ ಕಟಗಿ ಗುರುವಾರ ಮನವಿ ಸಲ್ಲಿಸಿದರು.
ಈಗಾಗಲೇ ಬನಹಟ್ಟಿಯಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ಯೋಜನೆ ವಿಲವಾಗಿದೆ. ಅದೇ ರೀತಿ ರಬಕವಿಯಲ್ಲಿಯೂ ಕಾಮಗಾರಿ ಮಾಡಿ ಸರ್ಕಾರದ ಹಣ ಪೋಲು ಮಾಡುವುದು ಸಲ್ಲ. ಅಮೃತ-2 ಯೋಜನೆಯು ಜನಸಾಮಾನ್ಯರಿಗೆ ಕುಡಿಯುವ ನೀರಿನ ಯೋಜನೆಗೆ ಪೂರಕವಾಗುವ ಬದಲಾಗಿ ಮಾರಕವಾಗಿದೆ ಎಂದು ಅರುಣ ಬುದ್ನಿ ಹೇಳಿದರು.
ಬನಹಟ್ಟಿಯಲ್ಲಿ ಮುಕ್ತಾಯಗೊಂಡಿರುವ ಈ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಮನೆ ಮುಂಭಾಗದಲ್ಲಿ ಅಳವಡಿಸಿರುವ ಮೀಟರ್‌ಗಳು ಮಾಯವಾಗಿವೆ. ನಗರಸಭೆಗೆ ಹಸ್ತಾಂತರದಲ್ಲಿ ಗೋಲ್‌ಮಾಲ್ ಆಗಿದ್ದು, ಇವೆಲ್ಲದರ ಕುರಿತು ಸಂಪೂರ್ಣ ತನಿಖೆಯಾದ ನಂತರ ಸರ್ವ ಸದಸ್ಯರ ಸಹಮತದೊಂದಿಗೆ ಕಾಮಗಾರಿ ನಡೆಸಬೇಕೆಂದು ಮನವಿ ಮಾಡಿದರು.