

ಹೊಳಲ್ಕೆರೆ: ಭಾರತ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಎಲ್ಲರೂ ಸಂಭ್ರಮದಿಂದ ಆಚರಿಸಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ.ಉಮೇಶ್ ಹೇಳಿದರು.
ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಹಮ್ಮಿಕೊಂಡಿದ್ದ ಭಾವುಟ ಅಭಿಯಾನದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, ತ್ರಿವರ್ಣ ಧ್ವಜ ನಮ್ಮ ಹಿರಿಯರ ತ್ಯಾಗ, ಶ್ರಮ, ಬಲಿದಾನಗಳ ಹೆಗ್ಗುರುತಾಗಿದೆ. ಇದಕ್ಕೆ ಯಾರೂ, ಯಾವತ್ತೂ ಅಗೌರವ ತೋರಬಾರದು ಎಂದು ಹೇಳಿದರು.
ಧ್ವಜ ದೇಶದ ಸ್ವಾತಂತ್ರ್ಯದ ಪ್ರತೀಕ ಹಾಗು ದೇಶವಾಸಿಗಳ ಏಕತೆ, ಪ್ರಗತಿಯ ಸಂಕೇತ. ನಮ್ಮೆಲ್ಲರ ಆತ್ಮಾಭಿಮಾನವೇ ತ್ರಿವರ್ಣ ಧ್ವಜದಲ್ಲಿ ಕಂಗೊಳಿಸುತ್ತದೆ. ಎಲ್ಲ ಜಾತಿ, ಮತ, ಧರ್ಮದ ನಾವೆಲ್ಲ ಧ್ವಜದಡಿ ಸಮಾನರಾಗಿ ಜೀವಿಸುತ್ತಿದ್ದೇವೆ ಎಂದರು.ದೇಶ ನಮಗೆ ಭದ್ರತೆ, ಶಿಕ್ಷಣ, ಸಾಮಾಜಿಕ ಸ್ಥಾನಮಾನ, ಸ್ವಾತಂತ್ರ್ಯ, ಸಮಾನತೆ, ಸ್ವಾಭಿಮಾನ ನೀಡಿದೆ ಎಂದು ಹೇಳಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ತ್ರಿವರ್ಣ ಧ್ವಜದ ಮಹತ್ವ ಹಾಗು ದೇಶದ ಸ್ವಾತಂತ್ರ್ಯದ ಇತಿಹಾಸವನ್ನು ಸಾರಿದರು.
ಆಜಾದಿ ಕಾ ಅಮೃತ ಮಹೋತ್ಸವ ಹರ್ ಘರ್ ತಿರಂಗ ಜಾಥಾ ಅಭಿಯಾನದಲ್ಲಿ ಮುಖ್ಯ ಶಿಕ್ಷಕ ಸಿದ್ದಪ್ಪ, ಸಹ ಶಿಕ್ಷಕಿ ರೇಷ್ಮಾ, ಅಂಗನವಾಡಿ ಶಿಕ್ಷಕಿ ರಾಧಾ, ಗ್ರಾಮಸ್ಥರಾದ ರಾಮಪ್ಪ, ಆನಂದ, ನಂದ್ಯಪ್ಪ, ಕೆಂಚಪ್ಪ, ಪನ್ನೇಶ, ತಿಮ್ಮಕ್ಕ, ಶಾರದಮ್ಮ ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲರೂ ರಾಷ್ಟ್ರಗೀತೆ, ದೇಶಭಕ್ತಿಗೀತೆ ಹಾಡಿದರು.