ಟೆಂಡರ್ ಕರೆದು ಕೆಲಸ ಪ್ರಾರಂಭಿಸಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

Amrita Urban Development Project Minister Chaluvarayaswamy Meeting
Published on

ಮಂಡ್ಯ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ(ಹಂತ-4)ಸ್ಥಳೀಯ ಸಂಸ್ಥೆಗಳಿಗೆ ಅನುಮೋದನೆಯಾದ ಕ್ರಿಯಾಯೋಜನೆಗಳ ಪೈಕಿ ಪ್ರಾರಂಭವಾಗದೆ ಇರುವ ಕಾಮಗಾರಿಗಳನ್ನು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಟೆಂಡರ್ ಕರೆದು ಕೆಲಸ ಪ್ರಾರಂಭಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಮೃತ ನಗರೋತ್ಥಾನ ಯೋಜನೆಯ(ಹಂತ-4)ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಯೋಜನೆಯಡಿ ಜಿಲ್ಲೆಗೆ ಒಟ್ಟು 105 ಕೋಟಿ ರೂ ಹಂಚಿಕೆಯಾಗಿವೆ. ಇದರಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಶಾಸಕರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಂತ ಹಂತವಾಗಿ ಪೂರ್ಣಗೊಳಿಸಿ. ಕುಡಿಯುವ ನೀರು, ಒಳಚರಂಡಿ, ರಸ್ತೆ ಅಭಿವೃದ್ಧಿ ಸೇರಿದಂತೆ ಇತರೆ ಯೋಜನೆಗಳ ಅಭಿವೃದ್ಧಿ ನಗರೋತ್ಥನಾದ ಉದ್ದೇಶವಾಗಿದೆ. ಇದನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಮಾತನಾಡಿ, ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ 8 ಕಾಮಗಾರಿ ಪ್ರಗತಿ, 5 ಟೆಂಡರ್ ಪ್ರಕ್ರಿಯೆಯಲ್ಲಿದೆ. 9 ಕಾಮಗಾರಿ ಪೂರ್ಣಗೊಂಡಿವೆ. ಮದ್ದೂರು ಪುರಸಭೆ ವ್ಯಾಪ್ತಿಯಲ್ಲಿ 6 ಕಾಮಗಾರಿ ಪ್ರಗತಿಯಲ್ಲಿದ್ದು, 6ಕ್ಕೆ ಟೆಂಡರ್ ಕರೆಯಬೇಕಿದೆ. 7 ಪೂರ್ಣಗೊಂಡಿವೆ. ಮಳವಳ್ಳಿ ವ್ಯಾಪ್ತಿಯಲ್ಲಿ 3 ಪ್ರಗತಿ, 6 ಟೆಂಡರ್ ಹಂತ ಹಾಗೂ 8 ಪೂರ್ಣಗೊಂಡಿವೆ. ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ 7 ಕಾಮಗಾರಿಗೆ ಟೆಂಡರ್ ಕರೆಯಬೇಕಿದ್ದು, 10 ಪೂರ್ಣಗೊಂಡಿವೆ. ಕೆ.ಆರ್.ಪೇಟೆ ವ್ಯಾಪ್ತಿಯಲ್ಲಿ 3 ಕಾಮಗಾರಿ ಪ್ರಗತಿಯಲ್ಲಿದ್ದು, 7ಕ್ಕೆ ಟೆಂಡರ್ ಕರೆಯಬೇಕಿದೆ. ಐದು ಕೆಲಸ ಪೂರ್ಣಗೊಂಡಿವೆ ಎಂದರು.

ಪಾಂಡವಪುರ ವ್ಯಾಪ್ತಿಯಲ್ಲಿ 7 ಕಾಮಗಾರಿ ಪ್ರಗತಿಯಲ್ಲಿದ್ದು, 10ಕ್ಕೆ ಟೆಂಡರ್ ಕರೆಯಬೇಕಿದೆ. ಹಾಗೂ ಒಂದು ಪೂರ್ಣಗೊಂಡಿವೆ. ನಾಗಮಂಗಲ ವ್ಯಾಪ್ತಿಯಲ್ಲಿ 4 ಕಾಮಗಾರಿ ಪ್ರಗತಿ ಮತ್ತು 1ಕ್ಕೆ ಟೆಂಡರ್ ಕರೆಯಬೇಕಿದ್ದು, 6 ಪೂರ್ಣಗೊಂಡಿವೆ. ಬೆಳ್ಳೂರು ವ್ಯಾಪ್ತಿಯಲ್ಲಿ 6 ಕಾಮಗಾರಿ ಟೆಂಡರ್ ಪ್ರಕ್ರಿಯೆ, 7 ಕೆಲಸ ಪೂರ್ಣಗೊಂಡಿವೆ. ಸ್ವಚ್ಛ ಭಾರತ್ ಯೋಜನೆಯಡಿ ಮದ್ದೂರು ಪುರಸಭೆಗೆ 72.75 ಲಕ್ಷ ರೂ, ಮಳವಳ್ಳಿ ಪುರಸಭೆಗೆ 34.70 ಲಕ್ಷ ರೂ, ಶ್ರೀರಂಗಪಟ್ಟಣ ಪುರಸಭೆಗೆ 67.08 ಲಕ್ಷ ರೂ, ಕೆ.ಆರ್.ಪೇಟೆ ಪುರಸಭೆಗೆ 26.07 ಲಕ್ಷ ರೂ ಲಭ್ಯವಿದೆ. ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಸಭೆಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕದಲೂರು ಉದಯ್, ಎಚ್.ಟಿ.ಮಂಜು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಎಸ್ಪಿ ಎನ್.ಯತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net