ರಾಜ್ಯದ 61 ನಿಲ್ದಾಣಗಳಿಗೆ ‘ಅಮೃತ’ ಟಚ್ : 5 ಸ್ಟೇಶನ್​ಗಳು 22ಕ್ಕೆ ಲೋಕಾರ್ಪಣೆ

New Rail new
Published on

ಹುಬ್ಬಳ್ಳಿ : ಪ್ರಯಾಣಿಕರು ಬಂದು ಹೋಗುವ ತಾಣಗಳಾಗಿ ಮಾತ್ರ ಉಳಿದಿಲ್ಲ ಇಂದಿನ ರೈಲು ನಿಲ್ದಾಣಗಳು.

ತಡರಾತ್ರಿ ರೈಲು ಪ್ರಯಾಣ ಇದ್ದರೆ ಪ್ರಯಾಣಿಕರು ನಿಲ್ದಾಣದಲ್ಲಿಯೇ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಮೀಪ ಇರುವ ಪ್ರವಾಸಿ ತಾಣಗಳ ವಿವರಗಳನ್ನು ನಿಲ್ದಾಣದಲ್ಲಿ ಅಳವಡಿಸಿರುವ ನಕಾಶೆಯಲ್ಲಿಯೇ ವೀಕ್ಷಿಸಿ, ಮುಂದಿನ ಪ್ರಯಾಣದ ಯೋಜನೆ ರೂಪಿಸಿಕೊಳ್ಳಬಹುದು.

ಒಂದು ಪ್ಲಾಟಫಾರ್ಮನಿಂದನಿಂದ ಮತ್ತೊಂದು ಪ್ಲಾಟಫಾರ್ಮ​ಗೆ ಹೋಗಲು ವೃದ್ಧರು, ಮಹಿಳೆಯರು, ಮಕ್ಕಳು ಚಿಂತಿಸಬೇಕಿಲ್ಲ. ನಿಲ್ದಾಣದಲ್ಲಿನ ಲಿಫ್ಟ್, ಎಸ್ಕಿಲೇಟರ್ ಗಳ ಸಹಾಯದಿಂದ ಪಾದಚಾರಿ ಮೇಲ್ಸೇತುವೆ ಮೂಲಕ ಬೇರೆ ಬೇರೆ ಪ್ಲಾಟಫಾರ್ಮ ತಲುಪಬಹುದು.

ಹೌದು, ಇದೆಲ್ಲ ಸಾಧ್ಯವಾಗಿದ್ದು ಅಮೃತ ಭಾರತ ರೈಲು ನಿಲ್ದಾಣಗಳ ಯೋಜನೆಯಿಂದ. ಈ ಯೋಜನೆ ಅಡಿ ದೇಶದಾದ್ಯಂತ 1,275 ರೈಲು ನಿಲ್ದಾಣಗಳನ್ನು ವಿವಿಧ ಹಂತಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಲ್ಲಿ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಕರ್ನಾಟಕದಲ್ಲಿನ 61 ನಿಲ್ದಾಣಗಳೂ ಸೇರಿವೆ.

ಮೊದಲ ಹಂತದಲ್ಲಿ ಕರ್ನಾಟಕದ 5 ನಿಲ್ದಾಣಗಳು ಸೇರಿದಂತೆ ದೇಶಾದ್ಯಂತ 103 ನಿಲ್ದಾಣಗಳು ಲೋಕಾರ್ಪಣೆಗೆ ಸಿದ್ದಗೊಂಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೇ 22ರಂದು 103 ಅಮೃತ ಭಾರತ ರೈಲು ನಿಲ್ದಾಣಗಳನ್ನು ವರ್ಚ್ಯುಯಲ್ ಮೂಲಕ ಲೋಕಾರ್ಪಣೆೆಗೊಳಿಸಲಿದ್ದಾರೆ.

ಕರ್ನಾಟಕದ ಧಾರವಾಡ, ಗದಗ, ಮುನಿರಾಬಾದ್, ಬಾಗಲಕೋಟೆ, ಗೋಕಾಕ ರೋಡನ ಅಮೃತ ಭಾರತ ರೈಲು ನಿಲ್ದಾಣಗಳು ಮೊದಲ ಹಂತದಲ್ಲಿ ಲೋಕಾರ್ಪಣೆಗೊಳ್ಳುತ್ತಿವೆ.

ಧಾರವಾಡ ನಿಲ್ದಾಣ ಹೊರತುಪಡಿಸಿ, ಇನ್ನುಳಿದ ನಾಲ್ಕೂ ನಿಲ್ದಾಣಗಳಲ್ಲಿ ಜಿ ಪ್ಲಸ್ ಒನ್ ಕಟ್ಟಡ ನಿರ್ವಿುಸಲಾಗಿದೆ. ಗದಗನಲ್ಲಿ ಹಳೆಯ ನಿಲ್ದಾಣದ ಕಟ್ಟಡ ತೆರುವುಗೊಳಿಸಿ ಹೊಸ ನಿಲ್ದಾಣ ನಿರ್ವಿುಸಲಾಗಿದೆ. ಧಾರವಾಡದಲ್ಲಿ ಎರಡನೇ ಪ್ರವೇಶ ದ್ವಾರ ( ಸೆಕೆಂಡ್ ಎಂಟ್ರಿ) ನಿರ್ವಿುಸಲಾಗಿದೆ.

ಈ ಎಲ್ಲ ಸೌಲಭ್ಯಗಳನ್ನು ಸಾಮಾನ್ಯವಾಗಿ ಎ ಮತ್ತು ಬಿ ಕೆಟಗೆರಿಯ ನಿಲ್ದಾಣಗಳಲ್ಲಿ ಕಾಣಬಹುದು. ಆದರೆ, ಇದೀಗ ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಿಂದಾಗಿ ಸಿ ಕೆಟಗೆರಿಯ ನಿಲ್ದಾಣಗಳೂ ಅತ್ಯಾಧುನಿಕ ಸೌಲಭ್ಯಗಳಿಂದ ಕಂಗೊಳಿಸುವಂತಾಗಿವೆ.

ವೆಚ್ಚ : ಒಟ್ಟು 90.01 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದ ಐದು ನಿಲ್ದಾಣಗಳು ಅಭಿವೃದ್ಧಿಗೊಳ್ಳುತ್ತಿವೆ.

ಇದರಲ್ಲಿ ಗದಗ ನಿಲ್ದಾಣ 23.24 ಕೋಟಿ ರೂ., ಮುನಿರಾಬಾದ್ ನಿಲ್ದಾಣ 18.40 ಕೋಟಿ ರೂ., ಗೋಕಾಕ್ ರೋಡ ನಿಲ್ದಾಣ 18.21 ಕೋಟಿ ರೂ., ಧಾರವಾಡ ನಿಲ್ದಾಣ 17 ಕೋಟಿ ರೂ. ಹಾಗೂ ಬಾಗಲಕೋಟೆ ನಿಲ್ದಾಣ16.06 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net