ಕೇಂದ್ರ ರೇಷ್ಮೆ ಮಂಡಳಿಗೆ ಅಮೃತ ಮಹೋತ್ಸವ ಸಂಭ್ರಮ:

mysore
Published on

ಮೈಸೂರು: ಕೇಂದ್ರ ರೇಷ್ಮೆ ಮಂಡಳಿಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸೆ.20ರಂದು ಬೆಳಗ್ಗೆ 10ಕ್ಕೆ ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.


ಜವಳಿ ಸಚಿವಾಲಯ, ಕೇಂದ್ರ ರೇಷ್ಮ ಮಂಡಳಿಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಕೈಗಾರಿಕೆ, ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ, ಜವಳಿ ಖಾತೆ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟ್, ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರೇಷ್ಮೆ ಸಚಿವ ಕೆ.ವೆಂಕಟೇಶ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಕೆ.ಹರೀಶ್‌ಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ, ಐಎಫ್‌ಎಸ್ ಅಧಿಕಾರಿ ಪಿ.ಶಿವಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕೇಂದ್ರ ರೇಷ್ಮೆ ಮಂಡಳಿ ಲಕ್ಷಾಂತರ ಜನರಿಗೆ 75 ವರ್ಷಗಳ ಸಮರ್ಪಿತ ಸೇವೆ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಅಮೃತಮಹೋತ್ಸವ ಆಚರಿಸಲಾಗುತ್ತಿದೆ. 1948ರ ಸೆಪ್ಟೆಂಬರ್ 20ರಂದು ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ರೇಷ್ಮೆ ಮಂಡಳಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ರೇಷ್ಮೆ ಉದ್ಯಮವನ್ನು ರೂಪಿಸಲು 1948ರಲ್ಲಿ ಮತ್ತೊಂದು ಕಾಯ್ದೆ ಅನುಷ್ಠಾನಗೊಳಿಸಿತು. ಇದು 1949ರ ಏಪ್ರಿಲ್ 9ರಂದು ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಅಧ್ಯಕ್ಷತೆಯಲ್ಲಿ ಕಾರ್ಯರೂಪಕ್ಕೆ ಬಂದಿದೆ ಎಂದು ಮಾಹಿತಿ ನೀಡಿದರು.


ಕೇಂದ್ರ ರೇಷ್ಮೆ ಮಂಡಳಿ ಕೇಂದ್ರ ಸ್ಥಾನ ದೆಹಲಿಯಾಗಿತ್ತು. ಬಳಿಕ 1953ರಲ್ಲಿ ಮುಂಬೈಗೆ ಸ್ಥಳಾಂತರಗೊಂಡಿತು. ಕರ್ನಾಟಕದ ರೇಷ್ಮೆ ಕೃಷಿ ಪ್ರಾಮುಖ್ಯತೆ ಗುರುತಿಸಿ 1981ರಲ್ಲಿ ಈ ಮಂಡಳಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಇದು 4 ಸಂಸದರು, 2 ರಾಜ್ಯಸಭಾ ಸದಸ್ಯರು ಸೇರಿದಂತೆ 39 ಸದಸ್ಯರನ್ನು ಒಳಗೊಂಡಿದೆ. ಅಧ್ಯಕ್ಷರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಿದೆ ಎಂದು ಮಾಹಿತಿ ನೀಡಿದರು.


ರೇಷ್ಮೆ ಹುಳು ಉತ್ಪಾದನಾ ಜಾಲ ಸೇರಿದಂತೆ ರೇಷ್ಮೆ ಕೃಷಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆಯನ್ನು ಈ ಮಂಡಳಿ ನೀಡಲಿದೆ. ಪ್ರಸ್ತುತ 159 ಘಟಕಗಳು ಈ ಮಂಡಳಿಯ ಅಧೀನದಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಮುಖ್ಯವಾಗಿ 9 ಸಂಶೋಧನಾ ಸಂಸ್ಥೆಗಳು ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.


ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕ ಡಾ.ಎಸ್.ಗಾಂಧಿದಾಸ್, ಗ್ವಾಲಿಯರ್ ನಿರ್ದೇಶಕ ಎನ್.ಕೆ.ಭತ್ರಾ, ರಾಂಚಿಯ ಸಿಟಿಆರ್‌ಟಿಎಫ್‌ನ ನಿರ್ದೇಶಕ ಎನ್.ಬಿ. ಚೌಧರಿ, ಹಿರಿಯ ಅಧಿಕಾರಿ ಸೆಲ್ವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net