ಜೀವಬಲಿಗೆ ಕಾಯುತ್ತಿದೆ ಹೊಂಡ! : ಅಮೃತ್ ಯೋಜನೆ ಪೈಪ್‌ಲೈನ್ ಅರ್ಧಂಬರ್ಧ ಕೆಲಸ : ಸವಾರರಿಗೆ ಸಂಕಷ್ಟ

New Project (10)
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿ ಕುಬೆವೂರು ಬಳಿ ಕಳೆದ ಒಂದು ತಿಂಗಳಿನಿಂದ ಅಮೃತ್ 2.0 ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಮಳೆಯಿಂದ ಸ್ಥಗಿತಗೊಂಡಿದ್ದು ಪೈಪ್‌ಲೈನ್‌ಗೆ ತೋಡಿದ ಹೊಂಡ ಮುಚ್ಚದೆ ಅಪಾಯ ಆಹ್ವಾನಿಸುತ್ತಿದೆ.

ಕಿನ್ನಿಗೋಳಿ ರಾಜ್ಯ ಹೆದ್ದಾರಿ ಕುಬೆವೂರು ರೈಲ್ವೆ ಮೇಲ್ಸೇತುವೆ ಬಳಿ ಪೈಪ್‌ಲೈನ್ ಕಾಮಗಾರಿ ಸ್ಥಗಿತದಿಂದ ಭಾರಿ ಗಾತ್ರದ ಹೊಂಡ ಉಂಟಾಗಿದ್ದು ವಾಹನ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಪೈಪ್‌ಲೈನ್‌ಗೆ ತೋಡಿದ ಹೊಂಡ ಮಳೆ ನೀರು ಹರಿದು ಕೆರೆಯಂತಾಗಿದ್ದು, ಹೊಂಡದ ಬದಿಯಲ್ಲಿ ವಿದ್ಯುತ್ ಕಂಬ, ಭಾರಿ ಗಾತ್ರದ ಮರಗಳು ಕೂಡ ಬೀಳುವ ಸ್ಥಿತಿಯಲ್ಲಿದೆ.

ಚರಂಡಿ ಸಮಸ್ಯೆ: ಈ ಭಾಗದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹೆದ್ದಾರಿಯಲ್ಲಿ ಹರಿದು ರಸ್ತೆ ಹೊಂಡಮಯವಾಗಿದೆ. ಇದೇ ರೀತಿ ಮುಂದಕ್ಕೆ ಕುಬೆವೂರು ತಿರುವು ಬಳಿ ಕೂಡ ಪೈಪ್‌ಲೈನ್ ಅರ್ಧಂಬರ್ಧ ಕಾಮಗಾರಿಯಿಂದ ಮೋರಿ ಕುಸಿಯುವ ಭೀತಿ ಇದ್ದು ಹೆದ್ದಾರಿ ವಾಹನ ಸವಾರರ ಬಲಿಗಾಗಿ ಕಾಯುತ್ತಿದೆ.

ಹತ್ತಿರದಲ್ಲಿ ಶಾಲೆ: ರಸ್ತೆ ಹತ್ತಿರದಲ್ಲಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಿದ್ದು, ಇದೇ ದಾರಿಯಲ್ಲಿ ಹೋಗಬೇಕಾಗಿದೆ. ದೊಡ್ಡ ವಾಹನ ಬಂದರೆ ರಸ್ತೆ ಅಂಚಿನಲ್ಲಿರುವ ಗುಂಡಿಯ ಕೆಸರು ಹಾಗೂ ಜವುಗು ಮಣ್ಣಿನಿಂದ ಪ್ರಾಣಾಪಾಯದ ಭೀತಿ ಇದೆ. ತಿರುವಿನಲ್ಲಿರುವ ಈ ಹೊಂಡ ರಾತ್ರಿ ಕಾಣಿಸುವುದಿಲ್ಲ ವಾಹನ ಚಾಲನೆ ಸಂದರ್ಭ ನಿಯಂತ್ರಣ ತಪ್ಪಿದ್ದಲ್ಲಿ ಅಥವಾ ಭಾರಿ ಮಳೆ ಸಂದರ್ಭ ನೀರು ತುಂಬಿ ರಸ್ತೆಯ ಮೇಲೆ ಹರಿಯುವಾಗ ಗುಂಡಿ ಕಾಣಿಸದೆ ಸಮಸ್ಯೆಯಾಗಲಿದೆ.

ಕೂಡಲೇ ಲೋಕೋಪಯೋಗಿ ಇಲಾಖೆ ಎಚ್ಚೆತ್ತು ಮುಂದಿನ ಮಳೆಗಾಲ ಮುಗಿಯುವವರೆಗೆ ಅರ್ಧಂಬರ್ಧ ಕಾಮಗಾರಿ ಪೈಪ್ ಲೈನ್‌ಗೆ ತೋಡಿದ ಹೊಂಡಗಳನ್ನು ಮುಚ್ಚಿ ಅಪಾಯ ತಪ್ಪಿಸಬೇಕಾಗಿದೆ.

ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಬಂದರೆ ಈ ಗುಂಡಿಗೆ ಬೀಳುವ ಭೀತಿ ಇದ್ದು ತಕ್ಷಣ ಗುಂಡಿಯನ್ನು ಕಲ್ಲುಗಳಿಂದ ಮುಚ್ಚಬೇಕಾಗಿದೆ. ನಿರಂಜನ ರಿಕ್ಷಾ ಚಾಲಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net