

ಶ್ರವವಣ್‌ಕುಮಾರ್ ನಾಳ, ಮಂಗಳೂರು
ಕುಡಿಯುವ ನೀರು ಯೋಜನೆಗಾಗಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜಾರಿಯಲ್ಲಿದ್ದ ಅಮೃತ್ ಯೋಜನೆಯ ‘2 ನೇ ಹಂತ’ ಅನುಷ್ಠಾನ ಇದೀಗ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗೂ ವಿಸ್ತರಿಸುವ ಮಹತ್ತರ ಯೋಜನೆಗೆ ಸರ್ಕಾರ ಅನುಮತಿ ನೀಡಿದೆ.
1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಆಯ್ದ ಸ್ಥಳೀಯ ಸಂಸ್ಥೆಗಳಲ್ಲಿ ಕೇಂದ್ರ ಸರ್ಕಾರದ ಅಮೃತ್ ಯೋಜನೆ ಅನುಷ್ಠಾನವಾಗಲಿದೆ. ಇದರಂತೆ ಸರ್ವೆ, ವಿನ್ಯಾಸ ಕಾರ್ಯ ನಡೆಸಿ, ವರದಿ ಕೇಂದ್ರಕ್ಕೆ ಸಲ್ಲಿಕೆಯಾಗಿ 2023ರ. ಡಿ.12ರಂದು ಇದಕ್ಕೆ ಅನುಮೋದನೆಯೂ ದೊರಕಿದೆ. ಶೇ.50 ಕೇಂದ್ರ ಸರ್ಕಾರ, ಶೇ.40 ರಾಜ್ಯ ಸರ್ಕಾರ ಹಾಗೂ ಶೇ.10 ಸ್ಥಳೀಯ ಆಡಳಿತದ ಅನುದಾನ ಈ ಯೋಜನೆಗೆ ಇರಲಿದೆ. ಸುಳ್ಯ, ಬಂಟ್ವಾಳದಲ್ಲಿ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಉಳ್ಳಾಲ, ಮೂಡುಬಿದಿರೆ, ಸೋಮೇಶ್ವರ, ಕೋಟೆಕಾರು, ಬಜ್ಪೆ, ಕಿನ್ನಿಗೋಳಿ, ಮೂಲ್ಕಿ ಪಟ್ಟಣದ ಯೋಜನೆಗೆ ಈಗಾಗಲೇ ಅನುಮೋದನೆ ಲಭಿಸಿದೆ.
*ಸಂಯೋಜಿತ ನೀರು ಸರಬರಾಜು ಯೋಜನೆ
ಅಮೃತ್ 2.0 ಯೋಜನೆಯಡಿ ಉಳ್ಳಾಲ ನಗರಕ್ಕೆ ನೀರು ಸರಬರಾಜು ವಿತರಣಾ ವ್ಯವಸ್ಥೆ ಕಲ್ಪಿಸಲು 70 ಕೋ.ರೂ., 77.08 ಕೋ.ರೂ ವೆಚ್ಚದಲ್ಲಿ ಮೂಡುಬಿದಿರೆ ಪಟ್ಟಣ, 45.60 ಕೋ.ರೂ. ವೆಚ್ಚದಲ್ಲಿ ಸೋಮೇಶ್ವರ ಪಟ್ಟಣ ಹಾಗೂ ಕೋಟೆಕಾರು ಪಟ್ಟಣಕ್ಕೆ 37.50 ಕೋ.ರೂ. ಮೊತ್ತದ ಅಂದಾಜುಪಟ್ಟಿಗೆ 2023ರ ಡಿ.12ರಂದು ಅನುಮೋದನೆ ದೊರೆತಿದೆ. ಈ ಪಟ್ಟಣದಲ್ಲಿ ನೀರು ಸರಬರಾಜು ವಿತರಣಾ ವ್ಯವಸ್ಥೆ ಬಲಗೊಳಿಸುವುದು ಈ ಯೋಜನೆ ಉದ್ದೇಶ. ಬಜಪೆ, ಕಿನ್ನಿಗೋಳಿ ಹಾಗೂ ಮೂಲ್ಕಿ ಪಟ್ಟಣಗಳಿಗೆ ಗುರುಪುರ(ಲ್ಗುಣಿ) ನದಿಯಿಂದ ಸಂಯೋಜಿತ ನೀರು ಸರಬರಾಜು ಯೋಜನೆಯಡಿ 168.12 ಕೋ.ರೂ. ಮೊತ್ತದ ಅಂದಾಜುಪಟ್ಟಿಗೆ ಡಿ.1ರಂದು ಅನುಮೋದನೆ ದೊರೆತಿದೆ.
------------------------
ಒಂಭತ್ತುಕೆರೆಯಲ್ಲಿ ಹೊಸ ಜಲ ಸಂಗ್ರಹಗಾರ
ನಗರೋತ್ಥಾನ ಮುನಿಸಿಪಾಲಿಟಿ ಕಾಮಗಾರಿಯಡಿ ಜಿಲ್ಲಾ ವಲಯದ ಯೋಜನೆಯಲ್ಲಿ ಮೂಡುಬಿದ್ರೆಯಲ್ಲಿ ಕುಡಿಯುವ ನೀರಿಗೆ 2.59 ಕೋ.ರೂ ವೆಚ್ಚದಲ್ಲಿ ಏರು ಕೊಳವೆಗಳನ್ನು ಜೋಡಣೆ ಮಾಡಲು 2021ರಲ್ಲಿ ಅಂತಿಮಗೊಳಿಸಿದ್ದ 2 ಟೆಂಡರ್ ರದ್ದುಗೊಂಡಿದ್ದು, ಅದರ ಬದಲಾಗಿ 3.15 ಕೋ.ರೂ.ಗಳಲ್ಲಿ ಪರಿಷ್ಕೃತ ಅಂದಾಜುಪಟ್ಟಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ. ಚೆಂಬುಗುಡ್ಡೆಯಲ್ಲಿ ಉದ್ದೇಶಿಸಿದ್ದ ಜಲಸಂಗ್ರಹಗಾರ ನಿರ್ಮಾಣವನ್ನು ಈಗ ಕೈಬಿಡಲಾಗಿದೆ. ಒಂಭತ್ತುಕೆರೆಯಲ್ಲಿ ಹೊಸತಾಗಿ ಜಲ ಸಂಗ್ರಹಗಾರ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
----------------
ಕಾಮಗಾರಿ 85ಶೇ. ಪ್ರಗತಿ
ರಾಜ್ಯ ವಲಯ ಯೋಜನೆಯಡಿ ಉಳ್ಳಾಲ ನಗರಸಭೆ, ಕೋಟೆಕಾರ್ ಕಟ್ಟಣ ಪಂಚಾಯಿತಿ ವ್ಯಾಪ್ತಿ ಹಾಗೂ ಮಾರ್ಗಮಧ್ಯೆ ಬರುವ ಗ್ರಾಮಗಳು, ಶಿಕ್ಷಣ ಸಂಸ್ಥೆಗಳಿಗೆ ನೇತ್ರಾವತಿ ನದಿಯಿಂದ ಸಗಟು ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿದ್ದರೂ, ಕಾಮಗಾರಿ ಶೇ.85ರಷ್ಟು ಪ್ರಗತಿಯಲ್ಲಿದೆ. ಕೆಲವೊಂದು ಸ್ಥಳದಲ್ಲಿ ಸುಮಾರು 2.30 ಕಿ.ಮೀ ಕೊಳವೆ ಮಾರ್ಗ ಅಳವಡಿಸಲು ಆಕ್ಷೇಪಣೆ ಇತ್ತು. ಲೋಕೋಪಯೋಗಿ ಇಲಾಖೆ ರಸ್ತೆ ಅಗಲೀಕರಣ ಕಾರಣದಿಂದ ಕೊಳವೆ ಕೆಲಸ ಬಾಕಿಯಾಗಿದೆ ಎಂಬುದು ಇಲಾಖೆಯ ಉತ್ತರ.
----------------
ದಕ್ಷಿಣ ಕನ್ನಡ ಜಿಲ್ಲೆಯ 9 ನಗರದಲ್ಲಿ ಅಮೃತ್ 2.0 ಯೋಜನೆಯಡಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಬಂಟ್ವಾಳ ಹಾಗೂ ಸುಳ್ಯ ನಗರದಲ್ಲಿ ಯೋಜನೆ ಈಗಾಗಲೇ ಆರಂಭವಾಗಿದೆ. ಉಳಿದಂತೆ ಉಳ್ಳಾಲ, ಮೂಡುಬಿದಿರೆ, ಸೋಮೇಶ್ವರ, ಕೋಟೆಕಾರು, ಬಜ್ಪೆ, ಕಿನ್ನಿಗೋಳಿ, ಮೂಲ್ಕಿ ಪಟ್ಟಣದ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ದೊರಕಿದೆ.
ಅಜಯ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು
ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ