

ಮಂಗಳೂರು: ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಉದ್ದೇಶದಿಂದ ಬಿಳಿಯೂರು ಡ್ಯಾಂನಿಂದ ಎಎಂಆರ್ ಡ್ಯಾಂಗೆ ನೀರು ಹರಿಸಲಾಗಿದ್ದು, ಬುಧವಾರ ಎಎಂಆರ್ ನೀರಿನ ಮಟ್ಟ ಏರಿಕೆಯಾಗಿದೆ.
ಮಂಗಳವಾರ ಎಎಂಆರ್‌ನಲ್ಲಿ 15.91 ಮೀ ನೀರಿದ್ದರೆ, ಬುಧವಾರ 16.14ಮೀ. ವರೆಗೆ ಏರಿಕೆಯಾಗಿದೆ. ತುಂಬೆಯಲ್ಲಿ ಬುಧವಾರ 0.04ಮೀ ಇಳಿಕೆಯಾಗಿ 3.60ಮೀ.ಗೆ ನೀರು ಇಳಿದಿದೆ. ತುಂಬೆ ಡ್ಯಾಂನಲ್ಲಿ ಸದ್ಯ ಇರುವ ನೀರು ಮುಂದಿನ 20 ದಿನಕ್ಕೆ ಮಾತ್ರ ಬರಲಿದೆ. ಡ್ಯಾಂನಲ್ಲಿ ಸುಮಾರು ಒಂದೂವರೆ ಮೀ.ನಷ್ಟು ದೂರ ವ್ಯಾಪ್ತಿಯಲ್ಲಿ ಮರಳು ಇದೆ ಎಂದು ಅಂದಾಜಿಸಲಾಗಿದೆ. ಒಂದೂವರೆ ಮಿ.ಕ್ಯು.ಮೀ. ಮರಳು ಇರಬಹುದು ಎನ್ನಲಾಗಿದೆ. ಆದರೆ, ಡ್ಯಾಂ, ಸೇತುವೆ ಸಹಿತ ವಿವಿಧ ಕಡೆಗಳಲ್ಲಿ ಡ್ರೆಜ್ಜಿಂಗ್ ಮಾಡಲು ಕಾನೂನು ಪ್ರಕಾರ ಅನುಮತಿ ಇಲ್ಲದ ಕಾರಣದಿಂದ ಮರಳು ತೆಗೆಯುವಂತಿಲ್ಲ.
*ತುಂಬೆಗೆ ಮತ್ತೆ ಎಎಂಆರ್ ನೀರು
ದಿನದಿಂದ ದಿನಕ್ಕೆ ತುಂಬೆ ಡ್ಯಾಂ ಮಟ್ಟ ಇಳಿಕೆಯಾಗುತ್ತಿದ್ದು, ನಗರಕ್ಕೆ ನೀರಿನ ಪೂರೈಕೆಗೆ ತೊಂದರೆಯಾಗುತ್ತಿದೆ. ಈಬಗ್ಗೆ ಪಾಲಿಕೆ ಆಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮತ್ತೆ ಎಎಂಆರ್ ನೀರು ಹರಿಸಲು ಅದೇಶ ನೀಡುವಂತೆ ಅವಲತ್ತುಕೊಂಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ತುಂಬೆಗೆ ಮತ್ತೆ ಎಎಂಆರ್ ನೀರು ಬಿಡುವ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಉತ್ತರ ಜಿಲ್ಲಾಧಿಕಾರಿಗಳದ್ದು. ಮುಂದಿನ ಒಂದು ವಾರ ಕರಾವಳಿಯಲ್ಲಿ ಉತ್ತಮ ಮಳೆಯ ನಿರೀಕ್ಷೆಯಿದ್ದು, ಮಳೆಯಾಗದೇ ಇದ್ದಲ್ಲಿ ಈಗಿರುವ ನೀರಿನ ರೇಷನಿಂಗ್ ವ್ಯವಸ್ಥೆಯನ್ನು 2-3 ದಿನಗಳಿಗೊಮ್ಮೆ ನೀರು ಪೂರೈಕೆಗೆ ಕ್ರಮಕೈಗೊಳ್ಳುವ ಸ್ಥಿತಿ ಬರಬಹುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
*ನೀರಿನ ಪೂರೈಕೆ ಸುಸೂತ್ರ
ಬುಧವಾರ ಬೆಂದೂರು ಸ್ಥಾವರ ವ್ಯಾಪ್ತಿಯ ಕೋರ್ಟ್ ವಾರ್ಡ್, ಕಾರ್‌ಸ್ಟ್ರೀಟ್, ಬಾವುಟಗುಡ್ಡೆ, ಆಕಾಶವಾಣಿ, ಪದವು, ಗೋರಿಗುಡ್ಡೆ, ಸೂಟರ್‌ಪೇಟೆ, ಶಿವಭಾಗ್, ಬೆಂದೂರು, ಕದ್ರಿ, ವಾಸ್ ಲೇನ್, ಕುದ್ರೋಳಿ, ಮೀನುಗಾರಿಕಾ ಬಂದರು, ಕೊಡಿಯಾಲ್‌ಬೈಲ್. ಪಡೀಲ್ ಸ್ಥಾವರ ವ್ಯಾಪ್ತಿಯ ಮಂಗಳಾದೇವಿಗೆ ನೀರು ಪೂರೈಕೆಯಾಗಿದೆ. ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯ, ಜಪ್ಪಿನಮೊಗರು, ಬಿಕರ್ನಕಟ್ಟೆ, ಉಲ್ಲಾಸ್ ನಗರ, ಬಜಾಲ್, ತಿರುವೈಲು, ವಾಮಂಜೂರು ಪ್ರದೇಶಕ್ಕೆ ಕೆಲವು ಹೊತ್ತು ಮಾತ್ರ ನೀರಿನ ಪೂರೈಕೆಯಾಗಿದೆ. ತುಂಬೆ ಪಣಂಬೂರು ನೇರ ಮಾರ್ಗ ವ್ಯಾಪ್ತಿಯ ಕಂಕನಾಡಿ, ನಾಗುರಿ, ಪಂಪ್‌ವೆಲ್, ಬಲ್ಲೂರುಗುಡ್ಡೆ, ಪಡೀಲ್‌ಗೆ ನೀರು ಪೂರೈಕೆಯಾಗಿದೆ.
*ಟ್ಯಾಂಕರ್ ನೀರು ಪೂರೈಕೆ
ಶಕ್ತಿನಗರ ಟ್ಯಾಂಕ್ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ನೀರು ತಲುಪದ ಹಿನ್ನೆಲೆಯಲ್ಲಿ ಕುಂಜತ್ತಬೈಲ್, ಮುಗುರೋಡಿ, ಶಕ್ತಿ ನಗರ, ಸಂಜಯ ನಗರ, ಪ್ರೀತಿ ನಗರ, ಮಂಜಡ್ಕ, ರಾಜೀವನಗರ, ಬೊಂದೆಲ್, ಗಾಂಧಿನಗರ, ಶಾಂತಿನಗರ, ಕಾವೂರು ಭಾಗಕ್ಕೆ ಪಾಲಿಕೆಯಿಂದ ಟ್ಯಾಂಕರ್ ನೀರಿನ ವ್ಯವಸ್ಥೆಯಾಗಿದೆ.
------------------
ತುಂಬೆ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ. ಆದರೂ ಕುಡಿಯುವ ಉದ್ದೇಶದಿಂದ ತುಂಬೆಯಿಂದ 2 ದಿನಗಳಿಗೊಮ್ಮೆ ನಗರದ ಹಲವಡೆ ನೀರು ಪೂರೈಕೆ ಸುಸೂತ್ರವಾಗಿ ನಡೆಯುತ್ತಿದೆ. ನೀರು ತಲುಪದ ಪ್ರದೇಶಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ.
ಆನಂದ್,
ಕಮಿಷನರ್, ಮನಪಾ ಮಂಗಳೂರು