ಜನರಲ್ಲಿ ಹೆಚ್ಚಾದ ಮದ್ರಾಸ್ ಐ ಭೀತಿ

16 ಅರಕೇರಾ 01 (1)
ಅರಕೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಹೊರನೋಟ.
Published on

ಅರಕೇರಾ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಮದ್ರಾಸ್ ಐ ಸೋಂಕು ಕಾಣಿಸಿಕೊಂಡಿದ್ದು ದಿನದಿಂದ ದಿನಕ್ಕೆ ರೋಗ ಉಲ್ಬಣಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಕಳೆದ ತಿಂಗಳಲ್ಲಿ ಸತತವಾಗಿ ಕೆಲ ಕಾಲ ಮಳೆ ಸುರಿದ ಪರಿಣಾಮ ವಾತಾವರಣದಲ್ಲಿ ತೇವಾಂಶ ಹೆಚ್ಚಳದಿಂದ ಕಳೆದ 15 ದಿನಗಳಿಂದ ರೋಗಭಾದೆ ಕಾಣಿಸಿಕೊಂಡಿದೆ.

ಕಣ್ಣುಗಳು ಚುಚ್ಚುವುದು, ಉರಿಯುವುದು, ಗುಲಾಬಿ ಹಾಗೂ ಕೆಂಪು ಬಣ್ಣಕ್ಕೆ ತಿರುಗುವುದು, ಕಣ್ಣಿನಲ್ಲಿ ನೀರು ಸುರಿಯುವುದು ಹಾಗೂ ತುರಿಕೆಯಿಂದ ರೋಗಿಗಗಳು ಹೈರಾಣಾಗಿದ್ದಾರೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಹಾಗೂ ವಯಸ್ಕರರಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ದಿನಕ್ಕೆ ಸರಾಸರಿ 50ರಿಂದ 60 ಜನ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ.

ಒಟ್ಟಾರೆ ಪಟ್ಟಣದಲ್ಲಿ 400 ರಿಂದ 500 ಜನರಿಗೆ ಮದ್ರಾಸ್ ಐ ಸೋಂಕು ತಗುಲಿದೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆ ಇದಾಗಿದ್ದರಿಂದ ಜನರಲ್ಲಿ ಭೀತಿ ಎದುರಾಗಿದೆ.

ಏಕಕಾಲದಲ್ಲಿ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದರಿಂದ ಔಷಧಿ ಪಡೆಯಲು ಮೆಡಿಕಲ್ ಸ್ಟೋರ್‌ಗೆ ಮುಗಿಬಿದ್ದಿದ್ದಾರೆ. ಇಲ್ಲಿನ ವಸತಿ ನಿಲಯಗಳಲ್ಲಿ ಕಣ್ಣು ಬೇನೆಗೆ ತುತ್ತಾದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.ಅಲ್ಲದೆ ಸೋಂಕಿನಿಂದ ಬಳಲುತ್ತಿರುವ ಮಕ್ಕಳನ್ನು ಶಾಲೆಗೆ ಬರದಿರಲು ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net