

ಹುಣಸೂರು : ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಮಕ್ಕಳಿಗೆ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ 199 ವಿದ್ಯಾರ್ಥಿಗಳು ತಪಾಸಣೆಗೊಳಗಾದರು.
ನಗರದ ಗುರುಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಬಿರದಲ್ಲಿ ತಪಾಸಣೆಗೊಳಗಾದ ಮಕ್ಕಳ ಪೈಕಿ 85 ವಿದ್ಯಾರ್ಥಿಗಳಿಗೆ ಕನ್ನಡಕ ಧರಿಸಲು ಸೂಚಿಸಿ, ಉಚಿತವಾಗಿ ಕನ್ನಡಕ ನೀಡಲು ಶಿಫಾರಸು ಮಾಡಲಾಯಿತು.
ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ, ಪಂಚೇಂದ್ರಿಯಗಳಲ್ಲಿ ಪ್ರಮುಖ ಸ್ಥಾನ ಕಣ್ಣಿಗೆ ನೀಡಿದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕೋವಿಡ್ ನಂತರ ಮೊಬೈಲ್ ಬಳಕೆಯಿಂದಾಗಿ ಮಕ್ಕಳ ದೃಷ್ಟಿಯಲ್ಲಿ ನ್ಯೂನತೆಗಳು ಗೋಚರಿಸುತ್ತಿದ್ದು, ಇವರನ್ನು ಗುರುತಿಸಿ ಸೂಕ್ತಚಿಕಿತ್ಸೆ ಕೊಡಿಸಿ, ಆ ಮೂಲಕ ಮಕ್ಕಳ ಕಣ್ಣಿನ ಆರೋಗ್ಯ ರಕ್ಷಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್ ಮಾತನಾಡಿದರು. ಆರ್‌ಬಿಎಸ್‌ಕೆ ತಂಡದ ಸಂಜಯ್ ಮತ್ತು ರವಿ ಅವರು ತಪಾಸಣೆ ನೇತೃತ್ವ ವಹಿಸಿದ್ದರು. ಬಿಐಇಆರ್‌ಟಿ ಸೋಮಶೇಖರ್, ಎ.ಎನ್.ತ್ರಿನೇಶ, ಎಚ್.ಪಿ.ವೀರಭದ್ರಪ್ಪ, ಎಚ್.ಜೆ.ಪ್ರಭಾಕರ, ದಾನಿಗಳಾದ ಸದೃಢ ಟ್ರಸ್ಟ್‌ನ ಮಂಜುನಾಥ್ ಭಾಗವಹಿಸಿದ್ದರು.