

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಪ ್ತಕಲೆಗಳಲ್ಲಿ ನೃತ್ಯ ಮತ್ತು ಸಂಗೀತವು ಮೊದಲಿಗೆ ಹುಟ್ಟಿವೆ. ಮನುಷ್ಯನು ಭಾಷೆ ಹುಟ್ಟುವ ಪೂರ್ವದಲ್ಲಿ ತನ್ನ ವಿಚಾರಗಳನ್ನು ಮುಖಭಾವ ಹಾಗೂ ಆಂಗಿಕ ಸಂಕೇತಗಳ ಮೂಲಕ ಅಭಿವ್ಯಕ್ತ ಪಡಿಸುತ್ತಿದ್ದ. ಈ ಎಲ್ಲ ಆಂಗಿಕ ಚಲನವಲನಗಳೇ ನೃತ್ಯಕ್ಕೆ ಮೂಲ ಪ್ರೇರಣೆಯಾಗಿ ಶಾಸ್ತ್ರೀಯವಾಗಿ ಬೆಳೆದುಕೊಂಡು ಬಂದಿದೆ ಎಂದು ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ಡಾ.ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.
ನಗರದ ಸೃಜನಾ ರಂಗ ಮಂದಿರದಲ್ಲಿ ಭರತ ನೃತ್ಯ ಅಕಾಡೆಮಿ ಹಾಗೂ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಶಿವಲಾಸ್ಯ ವೈಭವ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿದ್ವಾನ್ ರಾಜೇಂದ್ರ ಟೊಣಪಿ ಸರಳ, ಸಜ್ಜನಿಕೆಯ ಮೃದು ಸ್ವಭಾವದ ಸೃಜನಶೀಲ ಕಲಾವಿದ. ಒಂದು ಶಾಲೆಯಲ್ಲಿ ಶಿಕ್ಷಕನಾಗಿ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಕಲಿಕೆ ಸಂಸ್ಕಾರ ನೀಡುವಲ್ಲಿ 27 ವರ್ಷಗಳಿಂದ ನಿರತರಾಗಿರುವುದು ಶ್ಲಾಘನೀಯ ಕಾರ್ಯ ಎಂದರು.
ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಅಪ್ರತಿಮ ಯುವ ಕಲಾವಿದೆ ಅನನ್ಯ ಕಿರಣ ಹಾವಣಗಿ ಅವರಿಗೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿದ್ವಾನ್ ರಾಜೇಂದ್ರ ಟೊಣಪಿ, ಡಾ. ಆರ್.ವಿ. ದೇಶಪಾಂಡೆ, ಡಾ. ಪ್ರಸನ್ನ ಬೈಂದೂರ, ಭರತ ಹೂಗಾರ, ಪ್ರಕಾಶ ಹಾವಣಗಿ, ಎಸ್.ಎಂ.ಪಾಟೀಲ, ಕಿಶೋರ ಹಾವಣಗಿ, ಇತರರು ಇದ್ದರು.
ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ರವಿ ಕುಲಕರ್ಣಿ ಮತ್ತು ವಿಶಾಲಾಕ್ಷಿ ಶಿವಳ್ಳಿಮಠ ನಿರೂಪಿಸಿದರು. ಶಿವಾನಂದ ಹಂಜಿ ವಂದಿಸಿದರು. ನಂತರ ಶಿವಲಾಸ್ಯ ವೈಭವ ನೃತ್ಯೋತ್ಸವ ಜರುಗಿತು.