

ನಿಂಬರ್ಗಾ: ಮುಂಗಾರು ನಂದಿಮ್ಯಾಲ್ ಹಿಂಗಾರು ಆನಿಮ್ಯಾಲ್, ಹಿಂಗಾರು ಮುಂಗಾರು ಚಿಂತಾನ ಹಚ್ಚಿ ತೂಗಾರದಗ ಎರಡೂ ಸಮವಾಯಿತು ಎಂದು ಮಾಡಿಯಾಳ ಗ್ರಾಮದ ಶ್ರೀ ಅಮೋಘಸಿದ್ಧೇಶ್ವರ ಜಾತ್ರೆಯಲ್ಲಿ ಪ್ರಭುರಾಯ ಆರ್.ಮುತ್ತ್ಯಾ ಭವಿಷ್ಯ ವಾಣಿ ನುಡಿದರು.
ಜಾತ್ರೆ ನಿಮಿತ್ತ ಶುಕ್ರವಾರ ಬೆಳಗ್ಗಿನ ಜಾವ ನೆರೆದಿದ್ದ ಭಕ್ತರ ಮಧ್ಯೆ ಭವಿಷ್ಯ ನುಡಿದ ಮುತ್ತ್ಯಾ ಅವರು ಅರಕೇರಿ ಅರಮನೆ, ಕಲ್ಲೂರು ಗುರು ಮನೆ. ಮಾಯ ಮಕಣಾಪುರ, ಸಿಂಹಸ್ಥಾನ ಗದ್ದೆ ಸಮುದ್ರಕ್ಕ ಹೋಗಿ ಕಟ್ಟಿ ಪೂಜೆ ಮಾಡಿ ಧರ್ಮ ರಾಜ್ಯಗ ಹಚ್ಚಿ ಚಪ್ಪನಾಡಿಗೆಲ್ಲ ಜಾಡಗಂಬಳಿ ತಂದು ಜಾಡಸಿನಿ. ಬಸವನ ಹಸು, ಶಿಶುವಿನ ಹಸು ಚೌತಿಗೆ ಹರಿಬೇಕೆಂದ್ರೆ ದಸರಿಗೆ ಹೋಯಿತು ಎಂದು ಹೇಳಿದರು.
ಕೆಂಪ, ಕರಿ, ಬಿಳಿ ಧಾಣಿ ಸೋಸಿ ನೋಡದಾಗ ಮೂರು ಸಮವಾದವು. ಎಂಟು ದಿಕ್ಕು, ಹದಿನಾರು ಕೋನಿ, ನಾಲ್ಕು ಮೂಲಿ ಸೋಸಿ ನೋಡಿದಾಗ ಗಂಗೆ ನಾಡು ಎರಾಯಿತು. ಗಂಗಿನಾಡಿಗೆ ತಂಗಿ ತಯಾರಾಗ್ಯಾಳ. ಭೂತ್ಯಾಗ ಹಚ್ಚಿ ಬಯಲು ಮಾಡಿನಿ. ಬಸವಿಂದು ಸರೀತು ಶಿಶುವಿಂದ ಉಳಿತು. ಭಯ ಭಕ್ತಿಯಿಂದ ನಡೆದವರಿಗೆ ರಕ್ಷಣೆಯ ಬಲ ಹೆಚ್ಚತ್ತದೆ. ನಾ ಎಂಬ ದುರಹಂಕಾರಕ್ಕೆ ಜೀವನದಲ್ಲಿ ತಕ್ಕ ಶಾಸ್ತಿ ಅನುಭವಿಸುವ ಸಮಯ ನಿಮ್ಮ ಮುಂದಿದೆ ಎಂದು ಭವಿಷ್ಯ ನುಡಿದರು.
ಅಮಘೋಸಿದ್ಧೇಶ್ವರ ದೇವಸ್ಥಾನದಿಂದ ಬೆಳಗ್ಗಿನ ಜಾವ ೩ಕ್ಕೆ ಪಲ್ಲಕ್ಕಿ ಮತ್ತು ಮಖಾಗಳ ಮೆರವಣಿಗೆ ಮಾಳಿಂಗರಾಯ, ಹನುಮಾನ, ಮಲ್ಲಿಕಾರ್ಜುನ ಮಠ, ಸಂಗಮೇಶ್ವರ ಮಠ ಮತ್ತು ವಪ್ಪತ್ತೇಶ್ವರ ಮಠದ ಮೂಲಕ ಸಾಗಿ ದೇವಸ್ಥಾನಕ್ಕೆ ಆಗಮಿಸಿತು. ಡೊಳ್ಳು ಕುಣಿತ, ಮಖಾಗಳ ಕುಣಿತ ಗಮನ ಸೆಳೆಯಿತು. ನಿಂಬರ್ಗಾ ಠಾಣೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.