

ಹರೀಶ್ ಮೋಟುಕಾನ ಮಂಗಳೂರು
ಪರವಾನಗಿ ಪಡೆಯಲು ಇರುವಷ್ಟು ಉತ್ಸಾಹ ನಿಯಮ ಪಾಲನೆಯಲ್ಲಿಲ್ಲ. ಇದು ಮಂಗಳೂರಿನ ಕಟ್ಟಡ ಕಾಮಗಾರಿ ನಡೆಯುವ ಬಹುತೇಕ ಪರಿಸರವನ್ನು ಗಮನಿಸುವಾಗ ಸ್ಪಷ್ಟವಾಗುತ್ತದೆ.
ನಗರದಲ್ಲಿ ನೂರಕ್ಕಿಂತಲೂ ಅಧಿಕ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿವೆ. ಬಹುತೇಕ ಕಟ್ಟಡಗಳು ರಸ್ತೆ ಬದಿಯಲ್ಲೇ ನಿರ್ಮಾಣವಾಗುತ್ತವೆ. ಹಲವು ಕಡೆ ಕಾಮಗಾರಿಗೆ ಬೇಕಾದ ಹೊಯ್ಗೆ, ಕಲ್ಲು, ಮಣ್ಣು ರಸ್ತೆ ಬದಿಯಲ್ಲೇ ರಾಶಿ ಹಾಕಿ ಸಾರ್ವಜನಿಕರ ಸಂಚಾರಕ್ಕೆ ತೊಡಕುಂಟು ಮಾಡಿದ್ದಾರೆ.
ನಿಯಮ ಪ್ರಕಾರ ರಸ್ತೆ ಬದಿ ಕಲ್ಲು, ಮಣ್ಣು, ಹೊಯ್ಗೆ ಹಾಗೂ ಇತರ ಯಾವುದೇ ಸಾಮಗ್ರಿಗಳನ್ನು ರಾಶಿ ಹಾಕುವಂತಿಲ್ಲ. ಕಟ್ಟಡ ನಿರ್ಮಾಣಕ್ಕೆ ಮಹಾನಗರಪಾಲಿಕೆಯಿಂದ ಅನುಮತಿ ಪಡೆಯುವಾಗ ನೀಡುವ ನಿಯಮಾವಳಿಗಳಲ್ಲಿ ಈ ನಿಯಮವೂ ಸ್ಪಷ್ಟವಾಗಿ ಇದೆ. ಆದರೆ ಪಾಲನೆ ಮಾತ್ರ ಆಗುತ್ತಿಲ್ಲ. ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳುವವರೂ ಇಲ್ಲ.
ರಸ್ತೆ ಬದಿ ಮರಳು ತಂದು ಹಾಕುವುದರಿಂದ ಅದು ರಸ್ತೆಗೆ ಹರಡಿ ದ್ವಿಚಕ್ರ ವಾಹನಗಳು ಸ್ಕಿಡ್ ಆಗುವ ಅಪಾಯವಿದೆ. ನಗರದ ಜೈಲು ರಸ್ತೆ, ಬಿಜೈ, ಕಂಕನಾಡಿ, ವೆಲೆನ್ಸಿಯಾ, ಎಂ.ಜಿ.ರಸ್ತೆ, ಬಂಟ್ಸ್ ಹಾಸ್ಟೆಲ್ ಮೊದಲಾದ ಕಡೆಗಳಲ್ಲಿ ಕಟ್ಟಡ ಕಾಮಗಾರಿ ನಡೆಯುವಲ್ಲಿ ಮರಳು, ಕಲ್ಲುಗಳನ್ನು ಫುಟ್‌ಪಾತ್ ಹಾಗೂ ರಸ್ತೆಯಲ್ಲೇ ರಾಶಿ ಹಾಕಿದ್ದಾರೆ. ಇನ್ನು ಕೆಲವು ಕಡೆ ಖಾಲಿ ಸರ್ಕಾರಿ ಜಾಗದಲ್ಲಿ ಕಟ್ಟಡ ತ್ಯಾಜ್ಯವನ್ನು ರಾಶಿ ಹಾಕಿ ಹೋಗುತ್ತಿದ್ದಾರೆ. ಮೇರಿಹಿಲ್ ಹೆಲಿಪ್ಯಾಡ್ ರಸ್ತೆ ಬದಿಯಲ್ಲಿ ಲೋಡ್‌ಗಟ್ಟಲೆ ಕಟ್ಟಡ ತ್ಯಾಜ್ಯ ರಾಶಿ ಕಾಣಬಹುದು.
ರಸ್ತೆಯಲ್ಲಿ ಮಣ್ಣು: ಬೃಹತ್ ಕಟ್ಟಡ ನಿರ್ಮಾಣ ಸ್ಥಳದಿಂದ ಮಣ್ಣು ಸಾಗಿಸುವ ಟಿಪ್ಪರ್‌ಗಳು ರಸ್ತೆಯಲ್ಲಿ ಮಣ್ಣು ಚೆಲ್ಲುತ್ತಾ ಸಾಗುತ್ತಿವೆ. ಇದರಿಂದ ಕಾಂಕ್ರೀಟ್ ರಸ್ತೆ ಮಣ್ಣಿನ ರಸ್ತೆಯಂತಾಗಿವೆ. ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳು. ಸಂಚಾರಿಗಳ ಪಾಡು ಹೇಳತೀರದು. ಪರಿಣಾಮ ವಾಹನಗಳು ಬ್ರೇಕ್ ಹಿಡಿಯದೆ ಅಪಘಾತಗಳಿಗೆ ಕಾರಣವಾಗುತ್ತಿವೆ. ಮಹಾನಗರ ಪಾಲಿಕೆ ಅಧಿಕಾರಿಗಳು ಕಟ್ಟಡ ಕಾಮಗಾರಿ ನಡೆಯುವಲ್ಲಿಗೆ ತೆರಳಿ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಆಗಾಗ ಪರಿಶೀಲಿಸಬೇಕು. ಉಲ್ಲಂಘನೆಯಾಗಿದ್ದರೆ ಅಲ್ಲಿ ರಾಶಿ ಹಾಕಿದ ಪರಿಕರಗಳನ್ನು ವಶಕ್ಕೆ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಇಂತಹ ಅವ್ಯವಸ್ಥೆಗಳಿಗೆ ಕಡಿವಾಣ ಬೀಳಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಹಣ ಗಳಿಸುವ ಧಾವಂತದಲ್ಲಿ ಸಾರ್ವಜನಿಕರ ಸಮಸ್ಯೆ ಅರ್ಥವಾಗುವುದಿಲ್ಲ. ಕಟ್ಟಡ ನಿರ್ಮಾಣಗಾರರು ನಿಯಮ ಉಲ್ಲಂಘಿಸಿದರೆ ಅವರನ್ನು ಯಾರೂ ವಿಚಾರಿಸಲೂ ಹೋಗುವುದಿಲ್ಲ. ಇಲ್ಲಿ ತೊಂದರೆ ಅನುಭವಿಸುವವರು ಬಡ ಜನತೆ. ಫುಟ್‌ಪಾತ್ ಹಾಗೂ ರಸ್ತೆ ಬದಿ ಮರಳು, ಕಲ್ಲುಗಳನ್ನು ರಾಶಿ ಹಾಕಿದರೆ ಅದನ್ನು ವಶಪಡಿಸಿಕೊಳ್ಳುವ ಅಧಿಕಾರ ಪಾಲಿಕೆ ಆಯುಕ್ತರಿಗಿದೆ. ಈ ಬಗ್ಗೆ ಮೇಯರ್, ಆಯುಕ್ತರ ಗಮನಕ್ಕೆ ತಂದರೂ ಪ್ರಯೋಜನವಿಲ್ಲ. ಗೋಪಾಲಕೃಷ್ಣ ಭಟ್, ಸಾಮಾಜಿಕ ಕಾರ್ಯಕರ್ತ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡುವವರು ಕಲ್ಲು, ಮರಳು ಮತ್ತಿತರ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು. ಕೆಲವು ಕಡೆಗಳಲ್ಲಿ ಫುಟ್‌ಪಾತ್‌ಗಳ ಮೇಲೆ ಶೇಖರಿಸಿಟ್ಟಿರುವುದು ಗಮನಕ್ಕೆ ಬಂದಿದೆ. ಅದನ್ನು ತಕ್ಷಣ ತೆಗೆಯದಿದ್ದರೆ ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಂಡು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು. ಪ್ರೇಮಾನಂದ ಶೆಟ್ಟಿ, ಮೇಯರ್