ಶ್ರೀ ವೀರಭದ್ರದೇವರ ಗುಗ್ಗಳೋತ್ಸವ

16-aminbavi
Published on

ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಆವರಣದಲ್ಲಿಯ ಕ್ಷೇತ್ರನಾಥ ಶ್ರೀ ವೀರಭದ್ರ ದೇವರ ವಾರ್ಷಿಕ ಗುಗ್ಗಳೋತ್ಸವ ಶುಕ್ರವಾರ ಶಾಸ್ತ್ರೋಕ್ತವಾಗಿ ಭಕ್ತ ಗಣದ ವಿವಿಧ ಸೇವೆಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.

ಪ್ರಾತಃಕಾಲದಲ್ಲಿ ಶ್ರೀ ವೀರಭದ್ರ ದೇವರಿಗೆ ಪಂಚಾಮೃತ ಸಹಿತ ಏಕಾದಶ ಮಹಾರುದ್ರಾಭಿಷೇಕ, ಅಷ್ಟೋತ್ತರ, ನೂರೊಂದು ಬಿಲ್ವಾರ್ಚನೆ ಸಹಿತ ವಿಶೇಷ ಪೂಜೆಯು ಸೋಮಲಿಂಗಶಾಸ್ತ್ರಿ ಗುಡ್ಡದಮಠ, ವೀರಯ್ಯ ಹಿರೇಮಠ, ಶಿವಯೋಗಿ ಹಿರೇಮಠ, ವಿನಾಯಕ ಹಿರೇಮಠ ಅವರ ವೈದಿಕತ್ವದಲ್ಲಿ ಜರುಗಿತು.

ಗುಗ್ಗಳೋತ್ಸವವನ್ನು ಶ್ರೀಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಹಿರಿಯ ಪುರವಂತರಾದ ಬಸವಂತಪ್ಪ ಕಂಬಾರ, ದೇವೇಂದ್ರಪ್ಪ ಪತ್ತಾರ, ಮಡಿವಾಳಪ್ಪ ಕುರುವಿನಕೊಪ್ಪ, ಶಿವಾನಂದ ಕುಂಬಾರ, ಸತೀಶ ಮುಗಳಿ, ಶರಣಪ್ಪ ಕಂಬಾರ, ರುದ್ರಪ್ಪ ಕಂಬಾರ, ಅರುಣ ಕಂಬಾರ ಒಡಪುಗಳ ಭಕ್ತಿ ಸೇವೆ ಸಲ್ಲಿಸಿದರು. ವಿವಿಧ ಜನಪದ ವಾದ್ಯಗಳು, ನಂದಿಕೋಲು ಮತ್ತು ಪಲ್ಲಕ್ಕಿಗಳೊಂದಿಗೆ ಗುಗ್ಗಳೋತ್ಸವವು ಅಮ್ಮಿನಬಾವಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಾಲಯಕ್ಕೆ ಆಗಮಿಸಿತು.

ಹು-ಧಾ, ಅಮ್ಮಿನಬಾವಿ, ಮರೇವಾಡ, ತಿಮ್ಮಾಪುರ, ಕರಡಿಗುಡ್ಡ, ಮುಗದ, ಸುಳ್ಳ, ಹೆಬ್ಬಳ್ಳಿ, ಹಾರೋಬೆಳವಡಿ, ಕವಲಗೇರಿ, ಚಂದನಮಟ್ಟಿ, ಪುಡಕಲಕಟ್ಟಿ, ಉಪ್ಪಿನಬೆಟಗೇರಿ, ಇತರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net