

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಅಮ್ಮಿನಬಾವಿ ಗ್ರಾಮದ ಗುಡಿ ಓಣಿಯ ಪ್ಯಾಟಿ ಬಸವಣ್ಣ (ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಏ. 12ರಂದು ಜರುಗಲಿದೆ. ಜಾತ್ರೆಯ ಅಂಗವಾಗಿ ಏ. 11ರಂದು ರಾತ್ರಿ 8 ಗಂಟೆಗೆ ಉಚ್ಛಾಯ ಬಂಡಿ ಉತ್ಸವ ವಿವಿಧ ಜನಪದ ವಾದ್ಯಗಳ ಸಮೇತ ನಡೆಯಲಿದೆ. ದೇವಾಲಯದಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯುವುದು.
12ರಂದು ಪ್ರಾತಃಕಾಲದಲ್ಲಿ ಬಸವಣ್ಣ ದೇವರ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ ಜರುಗುವುದು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುವುದು. ಸಂಜೆ 4 ಗಂಟೆಗೆ ಅಲಂಕೃತ ರಥೋತ್ಸವವು ನಂದಿಕೋಲು, ಪಲ್ಲಕ್ಕಿ, ಕರಡಿ ಮಜಲು, ಭಜನೆಗಳ ಸಮೇತ ಆರಂಭಗೊಳ್ಳುವುದು. ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ರಥೋತ್ಸವದ ನಂತರ ವರ್ಷದ ಆಗುಹೋಗುಗಳ ಕುರಿತು ಹೇಳಿಕೆ ನೀಡುವರು ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.