

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಕೊಡಗಿನ ಕನಿಷ್ಠ ಒಬ್ಬ ಫುಟ್ಬಾಲ್ ಆಟಗಾರನಾದರೂ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕೆಂದು ಭಾರತೀಯ ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಐ.ಎಂ. ವಿಜಯನ್ ಆಶಯ ವ್ಯಕ್ತ ಪಡಿಸಿದರು.
ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಅಮ್ಮತ್ತಿ ಮಿಲನ್ಸ್ ಫುಟ್ಬಾಲ್ ಅಸೋಸಿಯೇಷನ್ ಆಯೋಜಿಸಿರುವ ರಾಷ್ಟ್ರಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಗೆ ಶುಕ್ರವಾರ ರಾತ್ರಿ ಚಾಲನೆ ನೀಡಿ ಮಾತನಾಡಿದರು.
ಕೊಡಗಿನಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಆ ಕಾರಣಕ್ಕಾಗಿ ಕ್ರೀಡಾ ಜಿಲ್ಲೆ ಎಂಬ ಪ್ರಖ್ಯಾತಿ ಹೊಂದಿದೆ. ಅದೇ ರೀತಿಯಲ್ಲಿ ಫುಟ್ಬಾಲ್ ಆಟಕ್ಕೂ ಹೆಚ್ಚಿನ ಒತ್ತು ನೀಡಬೇಕೆಂದರು. ಕೊಡಗಿನಲ್ಲಿ ನನಗೆ ಸಿಕ್ಕಷ್ಟು ಗೌರವ ಎಲ್ಲಿಯೂ ಸಿಕ್ಕಿಲ್ಲ. ಇದನ್ನು ಎಂದಿಗೂ ಮರೆಯುವುದಿಲ್ಲ ಎಂದು ಐ.ಎಂ. ವಿಜಯನ್ ಹೇಳಿದರು.
ಕೊಡಗಿನಲ್ಲಿ ಪ್ರಥಮ ಬಾರಿಗೆ ಅಮ್ಮತ್ತಿಯ ಮಿಲನ್ಸ್ ಫುಟ್ಬಾಲ್ ಅಸೋಸಿಯೇಷನ್ ಮೂಲಕ ಪೂರ್ಣ ಪ್ರಮಾಣದ ತಂಡ ಪಾಲ್ಗೊಳ್ಳು ವ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮೆಚ್ಚುಗೆ ವ್ಯಕ್ತ ಪಡಿಸಿದರು. ಹೊನಲು ಬೆಳಕಿನ ಪಂದ್ಯ ಆಗಿರುವುದರಿಂದ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರಿಗೆ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಿದ್ದಂತಾಗಿದೆ ಎಂದರು.
ಮಿಲನ್ಸ್ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎಂ. ಲಿಜೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರನ್ ನಾಣಯ್ಯ, ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಉಪಾಧ್ಯಕ್ಷ ಪಿ.ಕೆ. ಜಗದೀಶ್, ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಮಾಜಿ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ, ಅಮ್ಮತ್ತಿ ಕಾವೇರಿ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಮೊಳ್ಳೇರ ಸದಾ ಅಪ್ಪಚ್ಚು, ಪ್ರಾಯೋಜಕರಾದ ಶಾನ್, ಜಿದನ್, ಡಾ.ರಾಜಾ ವಿಜಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಚೆರಿಯಮನೆ ಗಾಯತ್ರಿ, ಅಸೀಫ್ ನಿರೂಪಿಸಿದರು. ಸಂಷನ್ ಪ್ರಾರ್ಥಿಸಿದರು. ಪಿ.ಎ. ನಾಗೇಶ್ ಸ್ವಾಗತಿಸಿದರು.