ಅಮ್ಮತ್ತಿಯಲ್ಲಿ ಅಖಿಲ ಭಾರತ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ

9mdkd7 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಅಮ್ಮತ್ತಿ ಮಿಲನ್ಸ್ ಕ್ಲಬ್ ಆಶ್ರಯದಲ್ಲಿ ಅಖಿಲ ಭಾರತ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ಜನವರಿ ೨೦ ರಿಂದ ೨೯ ರವರೆಗೆ ಅಮ್ಮತ್ತಿಯಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಎಂ.ಎಂ. ಲಿಜೇಶ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಸಹಯೋಗದಲ್ಲಿ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿರುವ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದ ಅತ್ಯುತ್ತಮ ಆಟಗಾರರು ಪಾಲ್ಗೊಳ್ಳಲಿದ್ದಾರೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೊಡಗಿನ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರನ್ನೊಳಗೊಂಡ ಒಂದು ತಂಡ ಪಾಲ್ಗೊಳ್ಳಲಿದ್ದಾರೆ.

ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಿಲದೆ. ಒಂದು ತಂಡದಲ್ಲಿ ೧೧+೫ ಆಟಗಾರರಿಗೆ ಅವಕಾಶವಿದೆ. ಆಯ್ದ ೧೬ ತಂಡಗಳು ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ೨೦ ಲಕ್ಷ ರೂ. ವೆಚ್ಚದಲ್ಲಿ ಪಂದ್ಯಾಟ ಆಯೋಜನೆ ಮಾಡಿದ್ದು, ಭಾಗವಹಿಸುವ ತಂಡಕ್ಕೆ ಪ್ರಯಾಣ ಭತ್ಯೆ ಸೇರಿದಂತೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದೆಂದರು.

ಕೊಡಗಿನಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಮಟ್ಟದ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗುತ್ತಿದ್ದು, ೫ ಸಾವಿರ ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಿಸಲಾಗುವುದು. ಕರ್ನಾಟಕ, ತಮಿಳುನಾಡು, ರಾಜಸ್ಥಾನ, ಕೇರಳ ರಾಜ್ಯದಿಂದ ವಿವಿಧ ಪ್ರತಿಷ್ಠಿತ ವೃತ್ತಿಪರ ತಂಡಗಳು ಪಾಲ್ಗೊಳ್ಳಲಿವೆ ಎಂದರು.

ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ೧.೫೦ ಲಕ್ಷ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೧ ಲಕ್ಷ ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಜನವರಿ ೨೦ ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಮಾಜಿ ನಾಯಕ ಐ.ಎಂ. ವಿಜಯನ್ ಪಾಲ್ಗೊಳ್ಳಿದ್ದಾರೆ. ೨೯ ರಂದು ನಡೆಯವು ಸಮಾರೋಪ ಸಮಾರಂಭದಲ್ಲಿ ಭಾರತೀಯ ಫುಟ್ಬಾಲ್ ಸಂಸ್ಥೆ ಉಪಾಧ್ಯಕ್ಷ ಎನ್.ಎ. ಹ್ಯಾರಿಸ್ ಪಾಲ್ಗೊಳ್ಳಲಿದ್ದಾರೆಂದರು.

ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕಾರ್ಯದರ್ಶಿ ಟಿ.ಎ. ನಾಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಕೃತಕ ಹುಲ್ಲುಹಾಸಿನ ಫುಟ್ಬಾಲ್ ಮೈದಾನ ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಅಗತ್ಯವಾದ ೫ ಎಕರೆ ಸರ್ಕಾರಿ ಜಾಗದ ಅಗತ್ಯತೆ ಇದ್ದು, ಜಾಗ ಪಡೆಯುವ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದರು.

ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಪಾಣತ್ತಲೆ ಜಗದೀಶ್, ಅಮ್ಮತ್ತಿ ಮಿಲನ್ ಬಾಯ್ಸ ಕಾರ್ಯದರ್ಶಿ ಎಂ.ಎಂ. ವಿನು, ಕ್ರೀಡಾ ಉಸ್ತುವಾರಿ ಕೆ.ಎಂ. ಅಸೀಫ್ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net