ಭಾರತ ವಿಶ್ವ ಕಪ್ ಫುಟ್ಬಾಲ್ ಆಡುವ ವಿಶ್ವಾಸ

21mdkj1 - Copy
Published on

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ

ಭಾರತ ಫುಟ್ಬಾಲ್ ತಂಡ ಶೀಘ್ರ ವಿಶ್ವ ಕಪ್ ಪಂದ್ಯ ಆಡಲಿದೆ ಎಂದು ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಐ.ಎಂ. ವಿಜಯನ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಅಮ್ಮತ್ತಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಭಾರತ ಫುಟ್ಬಾಲ್ ತಂಡ ಬಲಿಷ್ಠವಾಗಿದ್ದು, ಮುಂದಿನ ಅಥವಾ ಅದಾದ ನಂತರದ ವಿಶ್ವಕಪ್ ಆಡಲಿದೆ ಎಂದು ಭಾರತ್ ಫುಟ್ಬಾಲ್ ತಂಡದ ಹಾಲಿ ತಾಂತ್ರಿಕ ಸಮಿತಿ ಸದಸ್ಯರೂ ಆಗಿರುವ ವಿಜಯನ್ ಹೇಳಿದರು.
ಭಾರತ ತಂಡ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಿತ ತಂಡವಾಗಿದೆ. ಮುಂದಿನ ವಿಶ್ವಕಪ್ ಫುಟ್ಬಾಲ್ ಅರ್ಹತಾ ಪಂದ್ಯಾಟ ದಲ್ಲಿ ಭಾರತ ತಂಡ ಗೆದ್ದು ವಿಶ್ವಕಪ್ ಅರ್ಹತೆ ಪಡೆಯುವ ಅವಕಾಶ ಇದೆ ಎಂದರು.

ಏಷ್ಯಾ ಈ ಹಿಂದೆ ಫುಟ್ಬಾಲ್ನಲ್ಲಿ ಹಿಂದುಳಿದಿತ್ತು. ಪ್ರಸ್ತುತ ಏಷ್ಯಾದಿಂದ ೮ ತಂಡ ವಿಶ್ವಕಪ್‌ನಲ್ಲಿ ಭಾಗವಹಿಸಿದೆ. ದೊಡ್ಡ ದೊಡ್ಡ ರಾಷ್ಟ್ರ ಗಳನ್ನು ಮಣಿಸಿದೆ. ಹಾಗೇಯೆ ಭಾರತ ಕೂಡ ಮುಂದೊಂದು ದಿನ ವಿಶ್ವಕಪ್ ಆಡಲಿದೆ. ಭಾರತದಲ್ಲಿ ಇಂಡಿಯನ್ ಸೂಪರ್ ಲೀಗ್ ಆರಂಭವಾದ ಬಳಿಕ ಭಾರತೀಯ ಫುಟ್ಬಾಲ್ಗೆ ಪುನಶ್ಚೇತನ ದೊರಕಿದೆ. ಅಂತಾರಾಷ್ಟ್ರೀಯ ಆಟಗಾರರು ಐಎಸ್‌ಎಲ್ ಆಡುತ್ತಿದ್ದಾರೆ. ಆ
ಮೂಲಕ ಸ್ಥಳೀಯರ ಪ್ರತಿಭೆ ಅನಾವರಣಕ್ಕೆ ವೇದಿಕೆಯೊಂದಿಗೆ, ಅಂತಾರಾಷ್ಟ್ರೀಯ ಆಟಗಾರರೊಂದಿಗೆ ಆಡಲು ಅವಕಾಶ ದೊರಕಿದೆ ಎಂದರು.

ಇತ್ತೀಚೆಗಿನ ದಿನಗಳಲ್ಲಿ ಪಂದ್ಯಾಳಿಗಳು ಕಡಿಮೆ ಆಗುತ್ತಿದೆ. ಹಾಗಾಗಿ ಪ್ರತಿಭೆಗಳಿಗೆ ಅವಕಾಶ ದೊರಕುತ್ತಿಲ್ಲ. ಕೊಡಗು ಕ್ರೀಡಾ ಜಿಲ್ಲೆ ಯಾಗಿದ್ದು, ಫುಟ್ಬಾಲ್ಗೂ ಹೆಚ್ಚು ಮಹತ್ವ ನೀಡಲು ಸಲಹೆ ನೀಡಿದರು. ಕ್ರಿಕೆಟ್ ಶ್ರೀಮಂತ ಕ್ರೀಡೆಯಾಗಿದ್ದು, ಭಾರತದಲ್ಲಿ ಕ್ರಿಕೆಟ್ಗೆ ಹೆಚ್ಚು ಒಲವಿದೆ. ವಿಶ್ವದಲ್ಲಿ ಫುಟ್ಬಾಲ್ ಜನಪ್ರಿಯ ಕ್ರೀಡೆಯಾಗಿದ್ದು, ಇತ್ತೀಚೆಗಿನ ದಿನಗಳಲ್ಲಿ ಯುವ ಜನತೆ ಫುಟ್ಬಾಲ್ ಕಡೆ ಒಲವು ತೋರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಅರ್ಜೆಂಟೀನ ನನ್ನ ನೆಚ್ಚಿನ ತಂಡ. ವಿಶ್ವ ಫುಟ್ಬಾಲ್ನ ದೇವರು ಎಂದು ಹೇಳಲ್ಪಡುವ ಮರ್ಡೋನ ಜೊತೆಗೆ ಆಡಿದ್ದು ತನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಬಣ್ಣಿಸಿದರು. ಈ ಹಿಂದೆ ಸರ್ಕಾರಿ ನೌಕರಿ ಪಡೆಯುವ ಉದ್ದೇಶದಿಂದ ಫುಟ್ಬಾಲ್ ಸೇರಿದಂತೆ ವಿವಿಧ
ಕ್ರೀಡೆ ಆಡುತ್ತಿದ್ದರು. ಪ್ರಸ್ತುತ ಪಾಲಕರು ಸಣ್ಣ ಪ್ರಾಯದಿಂದಲೇ ಕ್ರೀಡೆಗೆ ಮಹತ್ವ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್ನಲ್ಲಿ ಆಟವಾಡದೇ ಮೈದಾನದಲ್ಲಿ ಆಡಲು ಪ್ರೋತ್ಸಾಹಿಸಬೇಕೆಂದರು.

ಕೊಡಗು ಉತ್ತಮ ಪ್ರಕೃತಿ ಹೊಂದಿರುವ ಪ್ರದೇಶ. ಮಿಲನ್ಸ್ ಬಾಯ್ ಅಮ್ಮತ್ತಿ ತಂಡ ಜಿಲ್ಲೆಯ ಫುಟ್ಬಾಲ್ನಲ್ಲಿ ಮೈಲುಗಲ್ಲು ಹಾಕಿದೆ. ಜಿಲ್ಲೆಯಲ್ಲಿ ಹೆಚ್ಚೆಚ್ಚು ಫುಟ್ಬಾಲ್ ಆಟಗಾರರು ತಯಾರಾಗಲಿ ಎಂದು ಆಶಿಸಿದರು.

ಈ ಸಂದರ್ಭ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಕೆ.ಕೆ. ರೆಜಿತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎ.ಎಸ್. ಮುಸ್ತಫಾ, ಉಪಾಧ್ಯಕ್ಷ ಪುತ್ತಂ ಪ್ರದೀಪ್ ಬಾಲನ್, ನಿರ್ದೇಶಕರಾದ ಕುಟ್ಟಂಡ ಅಜಿತ್ ಕರುಂಬಯ್ಯ, ಕಿಶೋರ್ ಕುಮಾರ್ ಶೆಟ್ಟಿ, ಸದಸ್ಯ ಎ.ಎನ್. ವಾಸು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net