

ಯಳಂದೂರು : ರಾಜ್ಯ ಸರ್ಕಾರಿ ನೌಕರರ ಸಂಘದ ಯಳಂದೂರು ತಾಲೂಕು ಘಟಕದ ಅಧ್ಯಕ್ಷ, ರಾಜ್ಯ ಪರಿಷತ್ ಸದಸ್ಯ ಹಾಗೂ ಕೋಶಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಮ್ಮನಪುರ ಮಹೇಶ್ ಆಯ್ಕೆಯಾದರು.
ಒಟ್ಟು 29 ನಿರ್ದೇಶಕರನ್ನು ಹೊಂದಿರುವ ತಾಲೂಕು ಸಂಘದ ಅಧ್ಯಕ್ಷ ಸ್ಥಾನಕ್ಕೆ ಶಿಕ್ಷಕ ಅಮ್ಮನಪುರ ಮಹೇಶ್ ಹಾಗೂ ಶಿಕ್ಷಕ ಬಸವಣ್ಣ ಸ್ಪರ್ಧಿಸಿದ್ದರು. ಅಮ್ಮನಪುರ ಮಹೇಶ್‌ಗೆ 17 ಹಾಗೂ ಬಸವಣ್ಣ ಪರ 12 ಮತಗಳು ಚಲಾವಣೆಯಾಗಿ ಅಮ್ಮನಪುರ ಮಹೇಶ್ ವಿಜೇತರಾದರು.
ರಾಜ್ಯ ಪರಿಷತ್‌ಗೆ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿಕ್ಷಕ ವೈ.ಎಂ.ಮಂಜುನಾಥ್ ಹಾಗೂ ಅರಣ್ಯ ಇಲಾಖೆಯ ಗೋವರ್ಧನ್ ಸ್ಪರ್ಧಿಸಿದ್ದರು. ವೈ.ಎಂ.ಮಂಜುನಾಥ್‌ಗೆ 19 ಮತಗಳು ಹಾಗೂ ಗೋವರ್ಧನ್‌ಗೆ 10 ಮತಗಳು ಬಂದಿದ್ದರಿಂದ 9 ಮತಗಳ ಅಂತರದಲ್ಲಿ ಮಂಜುನಾಥ್ ವಿಜೇತರಾದರು.
ಕೋಶಾಧ್ಯಕ್ಷ ಸ್ಥಾನಕ್ಕೆ ಆರೋಗ್ಯ ಇಲಾಖೆಯ ಜಗದೀಶ್, ತೋಟಗಾರಿಕಾ ಇಲಾಖೆಯ ಸುರೇಶ್ ಸ್ಪರ್ಧೆ ಮಾಡಿದ್ದರು. ಇದರಲ್ಲಿ ಜಗದೀಶ್‌ಗೆ 19 ಮತಗಳು ಬಂದಿದ್ದರಿಂದ ಇವರು ವಿಜೇತರಾದರು ಎಂದು ಚುನಾವಣಾಧಿಕಾರಿಯಾದ ತಹಸೀಲ್ದಾರ್ ಜಯಪ್ರಕಾಶ್ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಅಮ್ಮನಪುರ ಮಹೇಶ್ ಮಾತನಾಡಿ, ನಮ್ಮ ತಾಲೂಕು ಸಂಘದಲ್ಲಿ ನಾನು ಕಾರ್ಯದರ್ಶಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದೇನೆ. ಉತ್ತಮ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಸಂಘದ ನಿರ್ದೇಶಕರು ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಈಗ ನಮ್ಮ ಜವಾಬ್ದಾರಿ ಹೆಚ್ಚಿದೆ. ನನ್ನ ಮೇಲೆ ಇಟ್ಟಿರುವ ನಿರೀಕ್ಷೆಯನ್ನು ಹುಸಿಗೊಳಿಸದೆ, ಸರ್ಕಾರಿ ನೌಕರರಿಗೆ ಸಂಘದ ವತಿಯಿಂದ ಲಭಿಸುವ ಎಲ್ಲ ಸವಲತ್ತುಗಳನ್ನು ತಲುಪಿಸುವಲ್ಲಿ ನಾನು ಪ್ರಮಾಣಿಕವಾಗಿ ಕೆಲಸವನ್ನು ಮಾಡುತ್ತೇನೆ ಎಂದರು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ವಿಜೇತ ಅಭ್ಯರ್ಥಿಗಳ ಪರ ಬಂದಿದ್ದ ನಿರ್ದೆಶಕರು ಹಾಗೂ ಸದಸ್ಯರು ಹಾರತುರಾಯಿಗಳನ್ನು ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ರಾಜ್ಯ ಪರಿಷತ್ ಸದಸ್ಯ ವೈ.ಎಂ.ಮಂಜುನಾಥ್, ಕೋಶಾಧ್ಯಕ್ಷ ಜಗದೀಶ್ ಹಾಗೂ ಮಧುಕರ್, ರವಿಕುಮಾರ್, ವೈ.ಎಂ. ಮಲ್ಲಿಕಾರ್ಜುನಸ್ವಾಮಿ, ಮಹದೇವಸ್ವಾಮಿ, ನಾಗರಾಜು, ರವಿ, ನದೀಂಪಾಷ, ಅನ್ವರ್ ಪಾಷ ಸೇರಿದಂತೆ ಅನೇಕರು ಇದ್ದರು.