ಉಪಸಮರದಲ್ಲಿ ತೆನೆ ಹೊರಲಿರುವ ಅಮ್ಮಾಜಮ್ಮ

06 Sira-02
Published on

ತುಮಕೂರು/ಶಿರಾ: ಶಿರಾ ಉಪಸಮರಕ್ಕೆ ಅಳೆದೂ ತೂಗಿ ಜೆಡಿಎಸ್ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಚುನಾವಣಾ ರಣಾಂಗಣದಲ್ಲಿ ಎದುರಾಳಿಗಳ ವಿರುದ್ಧ ‘ಭಾವನಾತ್ಮಕ’ ಅಸ್ತ್ರ ಪ್ರಯೋಗಿಸಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ಸತ್ಯನಾರಾಯಣ ಕುಟುಂಬದ ಬೆನ್ನಿಗೆ ಪಕ್ಷ ಸದಾ ಇರಲಿದೆ ಎಂಬ ಮಾತಿಗೆ ಬದ್ಧರಾಗಿದ್ದಾರೆ.

ಸತ್ಯಣ್ಣನ ಪತ್ನಿ ಅಮ್ಮಾಜಮ್ಮಗೆ ಟಿಕೆಟ್ ಘೋಷಿಸಿರುವ ದೊಡ್ಡಗೌಡರು ಹಣಬಲ, ತೋಳ್ಬಲದ ರಾಜಕೀಯ ಜಿದ್ದಾಜಿದ್ದಿನ ಕಣದಲ್ಲಿ ‘ಅನುಕಂಪ’ ಬಲದ ಮೇಲೆ ಗೆಲ್ಲಲು ದಾಳ ಉರುಳಿಸಿದ್ದಾರೆ. ಕಾಂಗ್ರೆಸ್, ಬಿಜೆಪಿಯಂತಹ ಬಲಿಷ್ಠ ಪಕ್ಷಗಳ ವಿರುದ್ಧ ಸಮರ್ಥ ಅಭ್ಯರ್ಥಿ ಹುಡುಕಾಟ ನಡೆಸಿದ್ದ ವರಿಷ್ಠರು ಸತ್ಯನಾರಾಯಣ ಕುಟುಂಬದವರನ್ನು ಹೊರತುಪಡಿಸಿ ಬೇರೆ ಆಕಾಂಕ್ಷಿಗಳಿಗೆ ಮಣೆ ಹಾಕಿದ್ದೇ ಆದಲ್ಲಿ ಪಕ್ಷದ ವೋಟ್ ಬ್ಯಾಂಕ್‌ಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಮನಗಂಡು ಅಂತಿಮವಾಗಿ ಅಮ್ಮಾಜಮ್ಮ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.

ಅಮ್ಮಾಜಮ್ಮ ಮನವೊಲಿಸಿದ ವರಿಷ್ಠರು: ಪುತ್ರ ಸತ್ಯಪ್ರಕಾಶ್‌ಗೆ ಟಿಕೆಟ್ ನೀಡಬೇಕೆಂಬುದು ಅಮ್ಮಾಜಮ್ಮ ಅವರ ಒತ್ತಡವಾಗಿತ್ತು. ಸತ್ಯಪ್ರಕಾಶ್ ಬಗ್ಗೆ ಕ್ಷೇತ್ರದ ಜನತೆ, ಕಾರ್ಯಕರ್ತರು ಅಷ್ಟಾಗಿ ಒಲವು ತೋರದ ಕಾರಣ ಅಮ್ಮಾಜಮ್ಮ ಅವರ ಮನವೊಲಿಸುವಲ್ಲಿ ದಳಪತಿಗಳು ಯಶಸ್ವಿಯಾಗಿದ್ದಾರೆ. ಕ್ಷೇತ್ರ ಉಳಿಸಿಕೊಂಡು ಪಕ್ಷದ ಅಸ್ತಿತ್ವ ಕಾಪಾಡಿಕೊಳ್ಳುವ ದೊಡ್ಡ ಜವಾಬ್ದಾರಿ ಇರುವುದರಿಂದ ಪ್ರಯೋಗಕ್ಕೆ ಮುಂದಾಗದೆ ಅನುಕಂಪದ ಆಸರೆ ಪಡೆಯುವುದು ಜೆಡಿಎಸ್ ತಂತ್ರಗಾರಿಕೆಯಲ್ಲಿ ಅಡಗಿರುವುದು ಸುಸ್ಪಷ್ಟ.

35ವರ್ಷಗಳಿಂದ ದೇವೇಗೌಡರ ನೆರಳಲ್ಲೇ ಬೆಳೆದು ಮಂತ್ರಿಯಾಗಿದ್ದ ಸತ್ಯನಾರಾಯಣ ಅಕಾಲಿಕ ನಿಧನದಿಂದ ಎದುರಾಗಿರುವ ಉಪ ಚುನಾವಣೆ ಯವನ್ನು ದಳಪತಿಗಳು ವೈಯಕ್ತಿಕ ಪ್ರತಿಷ್ಠೆಯನ್ನಾಗಿ ತೆಗೆದು ಕೊಂಡಿದ್ದಾರೆ. ಉಪಸಮರದಲ್ಲಿ ಜೆಡಿಎಸ್ ಮೇಲ್ನೋಟಕ್ಕೆ ದುರ್ಬಲವಾಗಿ ಕಾಣುತ್ತಿದೆಯಾದರೂ ಕ್ಷೇತ್ರದಲ್ಲಿ ಪಕ್ಷಕ್ಕೆ ನಿಷ್ಠ ಕಾರ್ಯಕರ್ತರೇ ಆಧಾರ ಎನಿಸಲಿದ್ದಾರೆ.

ಕಣಕ್ಕಿಳಿಯಲಿದೆ ದೊಡ್ಡಗೌಡರ ಕುಟುಂಬ: ಪಕ್ಷದ ಅಸ್ತಿತ್ವ ಕಾಪಾಡಿಕೊಳ್ಳಲು ಮುಂದಾಗಿರುವ ದೊಡ್ಡಗೌಡರ ಕುಟುಂಬ ಕಣಕ್ಕಿಳಿಯಲಿದೆ. ಈಗಾಗಲೇ ಪಕ್ಷದಿಂದ ಬಹುತೇಕ ಕಾಲು ಹೊರಗಿಟ್ಟಿರುವ ಜಿಲ್ಲೆಯ ಕೆಲ ನಾಯಕರನ್ನು ನಂಬಿ ಕೈಸುಟ್ಟಿಕೊಳ್ಳುವ ಬದಲು ಮನೆಮಕ್ಕಳು, ಮೊಮ್ಮಕ್ಕಳಿಗೆ ಗೌಡರು ಚುನಾವಣೆ ಹೊಣೆ ಹೊರಿಸಿದ್ದಾರೆ. ಕುಂಚಿಟಿಗರ ಸಾಮ್ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಅಲ್ಲದೆ, ಸಂಸದ ಪ್ರಜ್ವಲ್, ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ಒಂದೊಂದು ಹೋಬಳಿಯ ಜವಾಬ್ದಾರಿ ವಹಿಸಿಕೊಳ್ಳಲಿರುವುದು ಕಾರ್ಯಕರ್ತರ ಉತ್ಸಾಹ ನೂರ್ಮುಡಿಗೊಳಿಸಿದೆ. ಎಚ್ಡಿಕೆ ಇಡೀ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳಲಿದ್ದರೆ, ಚುನಾವಣೆ ಸಮೀಪವಿದ್ದಾಗ ದೇವೇಗೌಡರು ಕ್ಷೇತ್ರದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ಗೆ ಶಿರಾ ನಗರ ಉಸ್ತುವಾರಿ ವಹಿಸಲಾಗಿದೆ.

ಅಮ್ಮಾಜಮ್ಮಗೆ ಕರೊನಾ: ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಗೆ ಕರೊನಾ ಸೋಂಕು ತಗುಲಿದೆ. ಸೋಮವಾರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ತುಮಕೂರಿನ ಪೃಥ್ವಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶೀಘ್ರ ಚೇತರಿಸಿಕೊಂಡು ಪ್ರಚಾರ ಕಣಕ್ಕಿಳಿಯಲಿದ್ದಾರೆ ಎಂದು ಪುತ್ರ ಸತ್ಯಪ್ರಕಾಶ್ ದೃಢಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net