ಹೋಳಿಗೆ ಅಮ್ಮನ ಪೂಜೆ

jlr
Published on

ಜಗಳೂರು: ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಹೋಳಿಗೆಮ್ಮ ಹಬ್ಬ ಆಚರಿಸಲಾಯಿತು.

ಮಂಜುನಾಥ ಬಡಾವಣೆ, ಹೊರಕೆರೆ, ಕ್ಯಾಂಪ್, ಓಂಕಾರೇಶ್ವರ ಬಡಾವಣೆ, ಜೆಸಿಆರ್ ಬಡಾವಣೆ, ಇಂದಿರಾ ಬಡಾವಣೆ ಮತ್ತು ಕೆಳಗೋಟೆ, ಕಣುಕುಪ್ಪೆ, ಕೆಚ್ಚೇನಹಳ್ಳಿ ಮತ್ತಿತರ ಹಳ್ಳಿಗಳಲ್ಲಿ ಆಷಾಢ ಮಾಸದ ಮೊದಲವಾರದಲ್ಲಿ ಹೋಳಿಗೆ ಅಮ್ಮನ ಪೂಜೆ ನೆರವೇರಿಸಲಾಯಿತು.

ಹೋಳಿಗೆ ಅಮ್ಮನ ಪೂಜೆಗಾಗಿ ಮನೆಯಲ್ಲಿ ಮಹಿಳೆಯರು, ಯುವತಿಯರು ಬೆಳಗ್ಗೆಯಿಂದ ಉಪವಾಸವಿದ್ದು ನೇಮದಿಂದ ಹೋಳಿಗೆ ತುಪ್ಪ, ಅನ್ನ, ಮೊಸರು ನೈವೇದ್ಯ ತಯಾರಿಸುತ್ತಾರೆ. ಇದನ್ನು ಅಡಕೆ ತಟ್ಟೆ, ಊಟದ ಎಲೆ, ಮಣ್ಣಿನ ಕುಡಿಕೆಯಲ್ಲಿ ಬೇವಿನ ಸೊಪ್ಪು ಇಟ್ಟು ಅರಿಶಿನ ಕುಂಕುಮ, ಬಳೆ, ತೆಂಗಿನಕಾಯಿ, ಬಾಳೆಹಣ್ಣು ಅರ್ಪಿಸುವ ಮೂಲಕ ಅಮ್ಮನ ಪೂಜೆ ನೆರವೇರಿಸಿದರು.

ಈ ಹಬ್ಬವನ್ನು ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಮಾಡಲು ಹಿಂದಿನಿಂದಲೂ ಆಚರಿಸಲಾಗುತ್ತಿದೆ. ಅಮ್ಮನನ್ನು ಬೇವಿನ ಸೊಪ್ಪಿನಲ್ಲಿ ಮುಚ್ಚಿ ಸಾಗಿಸುವುದರಿಂದ ಸೋಂಕುಗಳು ಹರಡುವುದಿಲ್ಲ ಎಂಬ ಪ್ರತೀತಿ ಇದೆ.

ಹೋಳಿಗೆ ಅಮ್ಮ ವಿಶೇಷ: ಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ದಡಾರ, ಪ್ಲೇಗ್, ಸಿಡುಬು ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟಶಕ್ತಿ ಊರೊಳಗೆ ಬಾರದಂತೆ ಹಾಗೂ ಕಾಲಕಾಲಕ್ಕೆ ಮಳೆ ಆಗುವುದಕ್ಕಾಗಿ ಹುಟ್ಟಿಕೊಂಡಿದ್ದೇ ಈ ಹೋಳಿಗೆ ಅಮ್ಮ. ಈ ಹಬ್ಬವನ್ನು ಹಿರಿಯರಿಂದ ಕಿರಿಯರವರೆಗೂ ಭಯ, ಭಕ್ತಿಯಿಂದ ಆಚರಿಸುತ್ತ ಬರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net