ಮಂಗಳೂರಿನಲ್ಲಿ ಭಕ್ತರಿಗೆ ಅಪ್ಪುಗೆ ನೀಡಿ ಹರಸಿದ ಅಮ್ಮ

ಅಮೃತ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಮಾತಾ ಅಮೃತಾನಂದಮಯಿ, ಶ್ರೀ ಜಿತಕಾಮಾನಂದ ಸ್ವಾಮೀಜಿ, ಪ್ರಲ್ಹಾದ್ ಜೋಶಿ, ಯು.ಟಿ.ಖಾದರ್, ಯಶ್‌ಪಾಲ್ ಸುವರ್ಣ, ಪ್ರಮೋದ್ ಮಧ್ವರಾಜ್ ಮೊದಲಾದವರಿದ್ದರು.
ಅಮೃತ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಮಾತಾ ಅಮೃತಾನಂದಮಯಿ, ಶ್ರೀ ಜಿತಕಾಮಾನಂದ ಸ್ವಾಮೀಜಿ, ಪ್ರಲ್ಹಾದ್ ಜೋಶಿ, ಯು.ಟಿ.ಖಾದರ್, ಯಶ್‌ಪಾಲ್ ಸುವರ್ಣ, ಪ್ರಮೋದ್ ಮಧ್ವರಾಜ್ ಮೊದಲಾದವರಿದ್ದರು.
Published on
ಮಂಗಳೂರು: ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪ್ರೀತಿಯೊಂದೇ ಪರಿಹಾರ. ಯಾವುದೇ ಭೇದಭಾವವಿಲ್ಲದೆ ಪ್ರತಿಯೊಬ್ಬರನ್ನೂ ಪ್ರೀತಿಸುವುದು ಮತ್ತು ಪರಸ್ಪರ ಕರುಣೆ ತೋರಿಸುವುದು ಮಾನವನ ಮೊದಲ ಕರ್ತವ್ಯವಾಗಬೇಕು ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ನುಡಿದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಮಂಗಳೂರು ಇದರ ವತಿಯಿಂದ ಗುರುವಾರ ಬೋಳೂರು ಅಮೃತ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ನಡೆದ ಅಮೃತ ಸಂಗಮ 2026ರಲ್ಲಿ ಸಮಾಜಮುಖಿ ಮಾನವೀಯ ಸೇವೆಗಳನ್ನು ಅನಾವರಣಗೊಳಿಸಿ, ಆಶೀರ್ವಚನ ನೀಡಿದರು.
ಪ್ರಕೃತಿ ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ. ಪ್ರಕೃತಿಯನ್ನು ಗೌರವಿಸುವುದು ಮತ್ತು ಗಿಡ-ಮರಗಳನ್ನು ಬೆಳೆಸುವುದು ದೇವರನ್ನು ಪೂಜಿಸಿದಷ್ಟೇ ಪವಿತ್ರವಾದುದು. ನಾವು ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಬಾಹ್ಯ ಪ್ರಪಂಚದಲ್ಲಿ ಶಾಂತಿಯನ್ನು ಹುಡುಕುವ ಮೊದಲು, ನಮ್ಮ ಮನಸ್ಸಿನೊಳಗೆ ಶಾಂತಿಯನ್ನು ಕಂಡುಕೊಳ್ಳಬೇಕು. ನಿಯಮಿತ ಪ್ರಾರ್ಥನೆ, ಧ್ಯಾನ ಮತ್ತು ಸತ್ಚಿಂತನೆಗಳು ಮನಸ್ಸನ್ನು ಶುದ್ಧೀಕರಿಸುತ್ತವೆ ಮತ್ತು ಸಕಾರಾತ್ಮಕ ಶಕ್ತಿಯನ್ನು ನೀಡುತ್ತವೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮುಖ್ಯ ಅತಿಥಿಯಾಗಿದ್ದರು. ದೀನ, ದಲಿತರು, ಬಡವರ ಪಾಲಿಗೆ ಸಾಕ್ಷಾತ್ ದೇವಿ ಸ್ವರೂಪಿನಿಯಾದ ‘ಅಮ್ಮ’ನ ಅಪ್ಪುಗೆಯಿಂದ ಜೀವನದಲ್ಲಿ ಧನ್ಯತೆಯ ಭಾವ ಮೂಡಿದೆ. ಸರ್ಕಾರ ಮಾಡಬೇಕಾದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಅಮ್ಮ ಮಾತೃದೇವೋಭವಕ್ಕೆ ಅರ್ಥ ತುಂಬಿದವರು. ಯಾವುದೇ ಜಾತಿ,ಮತ, ಧರ್ಮ ಭೇದಭಾವವಿಲ್ಲದೆ ನಿರ್ಮಲ ಪ್ರೀತಿಯ ‘ಅಮ್ಮ’ನ ಆಶೀರ್ವಾದ ದೇಶಕ್ಕೆ ಶಕ್ತಿ ತುಂಬಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಹಣ, ಅಧಿಕಾರ ಬಲದಿಂದ ಮಾನವ ಕುಲದ ಬದಲಾವಣೆ ಸಾಧ್ಯವಿಲ್ಲ. ಅಮ್ಮನಂತಹ ಆಧ್ಯಾತ್ಮಿಕ ವ್ಯಕ್ತಿಗಳಿಂದ ಮಾತ್ರ ಸಾಧ್ಯ. ದುರ್ಬಲ ವರ್ಗದ ಜನರ ಪಾಲಿಗೆ ಕರುಣಾಮಯಿಯಾಗಿ ಬೆಳಗುವ ಅಮ್ಮ ದೊಡ್ಡ ಶಕ್ತಿ. ಪಾಶ್ಚಾತ್ಯ ಸಂಸ್ಕೃತಿ ಬಂದರೂ ಭಾರತ, ಕರಾವಳಿಯ ಸಂಸ್ಕೃತಿ ನಶಿಸಲು ಸಾಧ್ಯವಿಲ್ಲ ಎಂದರು.
ಮಂಗಳಾದೇವಿ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ, ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರೀತೇಶ್ ಕುಮಾರ್ ಸಿಂಗ್, ಉದ್ಯಮಿಗಳಾದ ಪ್ರಕಾಶ್ ಪೈ ಪೆರಾಜೆ, ವೇದಪ್ರಕಾಶ್ ಶ್ರೀಯಾನ್, ಅದಾನಿ ಸಂಸ್ಥೆಯ ಮುಖ್ಯಸ್ಥ ಕಿಶೋರ್ ಆಳ್ವ ಅತಿಥಿಗಳಾಗಿದ್ದರು.
ಈ ಸಂದರ್ಭ ಅಮ್ಮನವರ ಮಾನವೀಯ ಸೇವಾ ಉಪಕ್ರಮಗಳ ಅನಾವರಣ ಹಾಗೂ ಫಲಾನುಭವಿಗಳಿಗೆ ವಿತರಣೆ ನಡೆಯಿತು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಡಾ.ಜೀವರಾಜ್ ಸೊರಕೆ, ಸಿಎ ವಾಮನ್ ಕಾಮತ್, ಡಾ.ವಸಂತ ಕುಮಾರ್ ಪೆರ್ಲ ಮೊದಲಾದವರಿದ್ದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಸ್ವಾಗತಿಸಿದರು. ಕಾರ್ಯದರ್ಶಿ ಸಿಎ ರಾಮನಾಥ್ ವಂದಿಸಿದರು. ಡಾ.ಅಶೋಕ್ ಶೆಣೈ ಹಾಗೂ ಡಾ.ನಂದಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ ಕಾರ್ಯಕ್ರಮ
ಅಮೃತ ಸಂಗಮ ಯಜ್ಞಶಾಲೆಯಲ್ಲಿ ಲಲಿತಾ ಸಹಸ್ರನಾಮ ಅರ್ಚನೆ, ರಾಹು ದೋಷ ನಿವಾರಣಾ ಪೂಜೆ, ಅಮ್ಮನ ಸತ್ಸಂಗ, ಭಜನೆ, ಧ್ಯಾನ, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಮಹಾಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮಹಾ ಮೃತ್ಯುಂಜಯ ಹೋಮ, ಮಹಾ ಸುದರ್ಶನ ಹೋಮ, ಅಲಂಕಾರ ಪೂಜೆ, ದೇವಿ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net