ಏ.೨೯ಕ್ಕೆ ಮಡಿಕೇರಿಗೆ ಬರುತ್ತಿದ್ದಾರೆ ಅಮಿತ್ ಶಾ

download
Published on

ಮಡಿಕೇರಿ:

ಕೇಂದ್ರ ಗೃಹ ಸಚಿವ ಅಮಿತ್‌ಶಾ ಶನಿವಾರವಾರ (ಏ.೨೯ಕ್ಕೆ) ಮಡಿಕೇರಿಗೆ ಆಗಮಿಸಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ ೧೦ ಗಂಟೆಗೆ ಗಾಂಧಿ ಮೈದಾನದಲ್ಲಿ ಸಭೆ ನಡೆಯಲಿದ್ದು ಜಿಲ್ಲೆಯ ಎರಡೂ ಕ್ಷೇತ್ರಗಳಿಂದಲೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಡಿಕೇರಿ ಕಾರ್ಯಕ್ರಮದ ನಂತರ ಅಮಿತ್‌ಶಾ ದಕ್ಷಿಣ ಕನ್ನಡಕ್ಕೆ ತೆರಳುತ್ತಾರೆ ಎಂದು ಮಾಹಿತಿ ನೀಡಿದರು.

ವಿರಾಜಪೇಟೆ ಕ್ಷೇತ್ರದ ಪಕ್ಷದ ಪ್ರಭಾರಿ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ರಾಜ್ಯದ ೨೨೪ ಕ್ಷೇತ್ರಗಳಲ್ಲೂ ಬಿಜೆಪಿ ಏಕಕಾಲದಲ್ಲಿ ವಿಶೇಷ ಪ್ರಚಾರ ಅಭಿಯಾನ ನಡೆಸುತ್ತಿದೆ. ರಾಷ್ಟ್ರೀಯ ನಾಯಕರಾದ ಜೆ.ಪಿ. ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್ ರಾಜ್ಯ ನಾಯಕರಾದ ನಳೀನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡ್ಯೂರಪ್ಪ ಈ ಪ್ರಚಾರ ಅಭಿಯಾನ ನಡೆಸುತ್ತಿದ್ದಾರೆ. ಇದರ ಒಂದು ಭಾಗವಾಗಿ ಅಮಿತ್‌ಶಾ ಅವರು ಮಡಿಕೇರಿಗೆ ಆಗಮಿಸಲಿದ್ದಾರೆ.

ಕಳೆದ ೩.೫ ವರ್ಷಗಳಲ್ಲಿ ಆಡಳಿತ ವಹಿಸಿಕೊಂಡ ಮೇಲೆ ಜನ ಸಾಮಾನ್ಯರ ಮಧ್ಯೆ ಬಿಜೆಪಿ ಕೆಲಸ ಮಾಡಿದೆ. ಕೊರೊನಾ, ಪ್ರಾಕೃತಿಕ ವಿಕೋಪ ಮತ್ತಿತರ ಸಂದರ್ಭಗಳಲ್ಲಿ ಮುಖ್ಯಮಂತ್ರಿಯಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತನ ತನಕ ಎಲ್ಲರೂ ದುಡಿದಿದ್ದಾರೆ. ಡಬಲ್ ಎಂಜಿನ್ ಸರಕಾರವಿದ್ದಾಗ ಯಾವ ರೀತಿ ಅಭಿವೃದ್ಧಿ ಆಗುತ್ತದೆ ಎನ್ನುವುದನ್ನುನ ತೋರಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಕನಿಷ್ಠ ೧೫೦೦ ಕೋಟಿ ರೂ. ಮೊತ್ತದ ಕೆಲಸಗಳು ಆಗಿದೆ. ದೇವಾಲಯಗಳ ಅಭಿವೃದ್ದಿಗೆ ಸರಾಸರಿ ೨ ಕೋಟಿ ರೂ. ಕೊಡಲಾಗಿದೆ. ಹಾಗಾಗಿ ಅಭಿವೃದ್ಧಿ ಆಧಾರದಲ್ಲಿ ಈ ಚುನಾವಣೆ ಎದುರಿಸತ್ತಿದ್ದು, ೧೯೮೫ರ ನಂತರ ರಾಜಕೀಯ ಪಕ್ಷವೊಂದು ಸತತ ೨ ಬಾರಿ ಗೆದ್ದ ಇತಿಹಾಸವನ್ನು ಬಿಜೆಪಿ ನಿರ್ಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ೭೫ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಹಿರಿಯರ ಜತೆಗೆ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಬದಲಾವಣೆಯನ್ನು ಜನ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ಇದೆ. ಮೀಸಲಾತಿ ಬಗ್ಗೆ ಸರಕಾರ ತೆಗೆದುಕೊಂಡ ನಿರ್ಣಯ ಚುನಾವನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನವೂ ಪ್ರಮುಖವಾಗಲಿದೆ.. ಕಾಂಗ್ರೆಸ್‌ನ ನಕರಾತ್ಮಕ ನಡೆಗಳೂ ಬಿಜೆಪಿಗೆ ಪೂರಕವಾಗಲಿದೆ. ಹಿಂದುತ್ವ, ರಾಷ್ಟ್ರೀಯತೆ ಮೇಲೆ ಬಿಜೆಪಿ ಬಿಜೆಪಿ ತಗೆದುಕೊಂಡ ನಿರ್ಣಯಗಳು ಜನರ ಮುಂದಿದೆ ಎಂದು ಹೇಳಿದರು.

ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಬಿಜೆಪಿ ಹಿಂದಿನಿಂದಲೂ ಚುನಾವಣೆ ಸಿದ್ಧವಾಗಿದೆ. ವ್ಯವಸ್ಥಿತವಾಗಿ ಕೆಲಸಗಳು ನಡೆದಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಮಾಡಲಾಗಿದೆ. ಚುನಾವಣೆ ಘೋಷಣೆ ನಂತರ ಜನ ಸಂಪರ್ಕ ಮಾಡಲಾಗಿದೆ ಎಂದರು.

ಕೇರಳ ಬಿಜೆಪಿಯ ಪ್ರಮುಖರಾದ ಜಯಚಂದ್ರನ್ ಮಾಸ್ಟರ್, ಕೊಡಗು ಬಿಜೆಪಿ ಪ್ರಮುಖರಾದ ಕಾಂಗೀರ ಅಶ್ವಿನ್, ಅರುಣ್ ಭೀಮಯ್ಯ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net