

ವಿಜಯಪುರ: ‘ಅಂಬೇಡ್ಕರ್ ಹೆಸರನ್ನು ಪದೇ ಪದೇ ಹೇಳುವ ಬದಲು ದೇವರ ಹೆಸರನ್ನು ಅಷ್ಟು ಬಾರಿ ಹೇಳಿದ್ದರೆ, ಏಳು ಜನ್ಮದ ಸ್ವರ್ಗ ಪ್ರಾಪ್ತಿಯಾಗಿರುತ್ತಿತ್ತು’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಾಗಿ ತಿಳಿಸಿದ ಬಿಜೆಪಿ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅವರು, ಅಮಿತ್ ಷಾ ಅವರ ಮುಂದುವರಿದ ಹೇಳಿಕೆಯನ್ನೂ ಮತ್ತು ಅದರ ತಾತ್ಪರ್ಯ ಅರಿಯಬೇಕೆಂದರು.
ಡಾ.ಬಾಬಾಸಾಹೇಬ ಅಂಬೇಡ್ಕರ್ ಹೆಸರಿನಲ್ಲಿ ನಡೆದ ಬಂದ್ ಆಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆ ನೀಡಿರುವುದು, ಅಮಾಯಕರ ಅಂಗಡಿಗೆ ಕಲ್ಲೆಸೆದಿದ್ದು, ಹಣದ ಡ್ರಾ ಚೆಕ್ ಮಾಡಿರುವುದು, ದೇವಸ್ಥಾನದ ಮುಂದೆ ಹೂ ಮಾರುವ ಮಹಿಳೆಯ ಮೇಲೆ ದಬ್ಬಾಳಿಕೆ ಮಾಡಿರುವುದು ಖಂಡನೀಯ. ಈ ಕುರಿತು ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ಬಂದ್ ಆಚರಣೆ ವೇಳೆ ಕೆಲವು ಸಂಘಟನೆಯವರು ದುಷ್ಕೃತ್ಯ ಎಸಗಿದ್ದಾರೆ. ಅಸಂವಿಧಾನಿಕ ಪದ ಬಳಸಿದ್ದಾರೆ. ಆ ಮೂಲಕ ಬಾಬಾಸಾಹೇಬರು ಮತ್ತು ಅವರ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ಕೂಡಲೇ ಅಂಥವರು ಕ್ಷಮೆ ಯಾಚಿಸಬೇಕು. ಅಲ್ಲದೇ, ದುಷ್ಕೃತ್ಯ ಎಸಗಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಎಸ್‌ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಅಮಿತ್ ಷಾ ಅವರ ಹೇಳಿಕೆಯನ್ನು ತಿರುಚಲಾಗಿದೆ. ಈ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಸೇರಿದಂತೆ ಬಿಜೆಪಿಯವರು ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ನೀಡಿದಷ್ಟು ಗೌರವ ಬೇರೆ ಯಾರೂ ನೀಡಿಲ್ಲ. ಇದೇ ಕಾಂಗ್ರೆಸ್ ಬಾಬಾಸಾಹೇಬರು ನಿಧನರಾದಾಗ ಅವರ ಅಂತ್ಯಸಂಸ್ಕಾರಕ್ಕೆ ಜಾಗ ಕೊಟ್ಟಿಲ್ಲ. ಪಾರ್ಥೀವ ಶರೀರ ಸಾಗಿಸಲು ನೆರವಾಗಿಲ್ಲ. ರಾಜಕೀಯವಾಗಿ ಬಾಬಾಸಾಹೇಬರನ್ನು ಸೋಲಿಸಿ ಅವಮಾನಿಸಿದ್ದಾರೆ. ಹೀಗಾಗಿ ಬಾಬಾಸಾಹೇಬರ ಹೆಸರು ಹೇಳಲು ಕಾಂಗ್ರೆಸ್‌ನವರಿಗೆ ಯೋಗ್ಯತೆ ಇಲ್ಲ ಎಂಬರ್ಥದಲ್ಲಿ ಅಮಿತ್ ಷಾ ಹೇಳಿದ್ದು ಸೂಕ್ತವಾಗಿದೆ ಎಂದರು.
ಮುಖಂಡ ಮಂಜುನಾಥ ಮಿಶೆ ಮಾತನಾಡಿ, ಕಾಂಗ್ರೆಸ್‌ನ ಅಪಪ್ರಚಾರಕ್ಕೆ ದಲಿತರು ಕಿವಿಗೊಡಬಾರದು. ಅಂಬೇಡ್ಕರ್ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದು ಅಕ್ಷಮ್ಯ ಅಪರಾಧ. ಈ ಬಗ್ಗೆ ಜಿಲ್ಲಾಡಳಿತ ಮೌನ ವಹಿಸಿರುವುದು ಏಕೆ? ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲವೇಕೆ? ಬಂದ್ ಹಿನ್ನೆಲೆ ಶಾಲೆ-ಕಾಲೇಜ್‌ಗಳಿಗೆ ರಜೆ ಘೋಷಣೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರಲ್ಲದೇ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಬಂದ್ ಆಚರಿಸಲಾಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದರು.
ಮುಖಂಡರಾದ ಚಿದಾನಂದ ಚಲವಾದಿ, ಶ್ರೀನಿವಾಸ ಕಂದಗಲ್ಲ, ಮಹೇಂದ್ರ ನಾಯಿಕ್ ಮತ್ತಿತರರು ಮಾತನಾಡಿ, ಅಮಿತ್ ಷಾ ಹೇಳಿಕೆಯನ್ನು ಸಮರ್ಥಿಸಿಕೊಂಡರಲ್ಲದೇ ಕಾಂಗ್ರೆಸ್ ಮತ್ತು ದಲಿತ ಸಂಘಟನೆಗಳು ಕೈಗೊಂಡ ಬಂದ್ ಆಚರಣೆಗೆ ಆಕ್ಷೇಪ ವ್ಯಕ್ತಪಡಿಸಿದರು.
ವಿಜಯಕುಮಾರ ಜೋಷಿ, ಮಲ್ಲಿಕಾರ್ಜುನ ದೇವರಮನಿ ಮತ್ತಿತರರಿದ್ದರು.