

ಅರಕಲಗೂಡು: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಡಾ.ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಸಂವಿಧಾನ ಶಿಲ್ಪಿಗೆ ಅವಮಾನಿಸಿರುವುದು ಸರಿಯಲ್ಲ ಎಂದು ದಸಂಸ ಜಿಲ್ಲಾ ಸಂಚಾಲಕ ಗಣೇಶ್ ವೇಲಾಪುರಿ ಖಂಡಿಸಿದ್ದಾರೆ.
ಶೋಷಿತರು, ಬಡವರ ಪರ ಜೀವಮಾನವಿಡೀ ದುಡಿದು ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನವು ವಿಶ್ವ ಶ್ರೇಷ್ಠವೆಂದು ಜಗಜ್ಜಾಹೀರಾಗಿದೆ. ಇಂತಹ ಮಹಾನ್ ವ್ಯಕ್ತಿಯ ಕುರಿತು ಅಮಿತ್ ಷಾ ತನ್ನ ಹುದ್ದೆಯ ಘನತೆ ಮರೆತು ಕ್ಷುಲ್ಲಕ ಹೇಳಿಕೆ ನೀಡಿರುವುದು ಅವರಿಗೆ ಶೋಭೆ ತರುವ ಸಂಗತಿಯಲ್ಲ. ಇದು ಮನು ಸಂಸ್ಕೃತಿಯ ಬಿಜೆಪಿಗರ ಮನಸ್ಥಿತಿ ಇಂದಿಗೂ ಬದಲಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ಶೋಷಿತರನ್ನು ಕೂಡ ಅವಮಾನಿಸಿ ನೋವುಂಟು ಮಾಡಿದ್ದಾರೆ. ಇವರನ್ನು ಸಂಪುಟದಿಂದ ಕೈ ಬಿಡಬೇಕು. ಅಮಿತ್ ಷಾ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.