ಅಂಬೇಡ್ಕರ್ ಕುರಿತು ಅಮಿತ್ ಷಾ ವಿವಾದಾತ್ಮಕ ಹೇಳಿಕೆ : ಮೈಸೂರು ಬಂದ್ ಸಂಪೂರ್ಣ ಯಶಸ್ವಿ

WhatsApp Image 2025-01-07 at 11.53.21 AM
Published on

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ಖಂಡಿಸಿ ವಿವಿಧ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಮೈಸೂರು ಬಂದ್' ಸಂಪೂರ್ಣ ಯಶಸ್ವಿಗೊಂಡಿತು. ಬಂದ್ ಕರೆ ಹಿನ್ನೆಲೆಯಲ್ಲಿ ನಗರ ಸಂಪೂರ್ಣ ಸ್ತಬ್ಧಗೊಂಡಿತು.

ನಗರದ ಎಲ್ಲ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿತ್ತು. ಕೆಎಸ್'ಆರ್'ಟಿಸಿ ನಗರ ಮತ್ತು ಗ್ರಾಮಾಂತರ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಮೈಸೂರು ಮೂಲಕ ಹೊರ ಜಿಲ್ಲೆಗೆ ತೆರಳುವ ಬಸ್ ಗಳು ನಗರಕ್ಕೆ ಆಗಮಿಸಲಿಲ್ಲ. ಆಟೋ ಸಂಚಾರ ಹಾಗೂ ಟ್ಯಾಕ್ಸಿಗಳ ಸಂಚಾರ ಎಂದಿನಂತೆ ಇತ್ತು. ಅದೇ ರೀತಿ ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಇತ್ತು. ಆದರೆ, ಬಂದ್'ಗೆ ಕರೆ ನೀಡಿದವರು ನಗರದ ಅಲ್ಲಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಾಹನ ಸವಾರರು ಬದಲಿ ಮಾರ್ಗದ ಮೂಲಕ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಯಿತು.

ನಗರದ ಹೃದಯ ಭಾಗದಲ್ಲಿರುವ ದೇವರಾಜ ಅರಸು ರಸ್ತೆ, ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಬಿ.ಎನ್. ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್'ಬಿ ರಸ್ತೆ, ಧನ್ವಂತ್ರಿ ರಸ್ತೆ ಸೇರಿದಂತೆ ನಗರದ ಎಲ್ಲ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿತ್ತು. ಕೆಲವು ಕಡೆಗಳಲ್ಲಿ ಅಂಗಡಿ ಗಳು ಬೆಳಗ್ಗೆ ತೆರೆದಿದ್ದ ಸಂದರ್ಭ ಬಂದ್'ಗೆ ಕರೆ ನೀಡಿದವರು ಸ್ಥಳಕ್ಕೆ ತೆರಳಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net