ಅಮಿತ್ ಷಾ ಕೂಡಲೇ ರಾಜೀನಾಮೆ ನೀಡಲಿ; ನಾಯಕರ ಒಕ್ಕೋರಲಿನ ಆಗ್ರಹ

VIJAYAPUR BAND SAMAVESHA
ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆದ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾಜಿ ಶಾಸಕ ರಾಜು ಆಲಗೂರ ಮಾತನಾಡಿದರು.
Published on

ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ್ ಕೊಟ್ಟ ಸಂವಿಧಾನದ ಬಲದಿಂದಲೇ ಅಮಿತ್ ಷಾ ಅಂಥವರು ಸಂಸತ್ ಪ್ರವೇಶಿಸಲು ಸಾಧ್ಯವಾಗಿದೆ. ಬಾಬಾಸಾಹೇಬರು ಕೊಟ್ಟ ಭಿಕ್ಷೆಯಿಂದಲೇ ಅಮಿತ್ ಷಾ ಸಚಿವರಾಗಿದ್ದು, ಇದೀಗ ಅವರದ್ದೇ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೀಗಾಗಿ ಇವರೊಬ್ಬ ಸಂವಿಧಾನ ವಿರೋಧಿಯಾಗಿದ್ದು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಮಾಜಿ ಶಾಸಕರಾದ ರಾಜು ಆಲಗೂರ ಹಾಗೂ ಶರಣಪ್ಪ ಸುಣಗಾರ ಆಗ್ರಹಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಸಾವಿರಾರು ಜಾತಿ, ಧರ್ಮ, ಸಂಸ್ಕೃತಿ ಹೊಂದಿದ ಈ ದೇಶದ ಜನರನ್ನು ಒಂದು ಮಾಡುವ ಕೆಲಸ ಅಂಬೇಡ್ಕರ್ ಮಾಡಿದ್ದಾರೆ. ಯಾವುದೇ ದೇವರು ಹಾಗೂ ಸ್ವಾಮೀಜಿಗಳಿಗೆ ನಮಗೆ ಮುಕ್ತಿ ಕೊಡಲಾಗಲಿಲ್ಲ. ನಮಗೆ ಮುಕ್ತಿಕೊಟ್ಟಿದ್ದು ಅಂಬೇಡ್ಕರ್. ಹೀಗಾಗಿ ಅಂಬೇಡ್ಕರ್ ನಮಗೆ ದೇವರಿಗಿಂತ ಹೆಚ್ಚು ಎಂದರು.

ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಮಾತನಾಡಿ, ಅಮಿತ್ ಷಾ ಗೃಹ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲವಾದಲ್ಲಿ ರಾಷ್ಟ್ರಾದ್ಯಂತ ಹೋರಾಟ ಚುರುಕುಗೊಳಿಸಬೇಕಾಗುತ್ತದೆ ಎಂದರು.

ಮುಖಂಡ ಬಾಬುರಾಜೇಂದ್ರ ನಾಯಕ ಮಾತನಾಡಿ, ಜಗತ್ತಿಗೆ ಸಮಾನತೆ ಸಂದೇಶ ಸಾರಿದ ಅಂಬೇಡ್ಕರ್ ಕೊಟ್ಟ ಭಿಕ್ಷೆಯ ಆಧಾರದ ಮೇಲೆ ಸಂಸತ್‌ನಲ್ಲಿ ಅಧಿಕಾರ ಪಡೆದು ಇಂದು ಅದೇ ಬಾಬಾಸಾಹೇಬರ ಬಗ್ಗೆ ಅಮಿತ್ ಷಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಂಬೇಡ್ಕರ್ ಹೆಸರು ಹೇಳುವುದು ಫ್ಯಾಶನ್ ಆಗಿದೆ ಎಂದಿದ್ದಾರೆ. ಆದರೆ, ಅಂಬೇಡ್ಕರ್ ನಮಗೆ ಫ್ಯಾಶನ್ ಅಲ್ಲ ಅವರು ನಮ್ಮ ರಕ್ತ. ನಮ್ಮ ಸ್ಮರಣೆ ಎಂದರು.

ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಅಮಿತ್ ಷಾ ಈ ದೇಶದ ಮೂಲ ನಿವಾಸಿಗಳನ್ನು ಕೆಣಕಿದ್ದಾರೆ. ನಮ್ಮ ಅಸ್ಮಿತೆಗೆ ಕೈ ಹಾಕಿದ್ದಾರೆ. ನಮ್ಮ ಅಸ್ಥಿತ್ವವನ್ನು ಕೆಣಕಿದ್ದಾರೆ. ಇದಕ್ಕೆ ತಕ್ಕ ಪಾಠ ಕಲಿಸದೇ ಬಿಡೆವು ಎಂದರು.

ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಸ್ವರ್ಗ ನರಕ ಇದೆಯೋ ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ ನಮಗೆ ಬಾಬಾಸಾಹೇಬರೇ ಎಲ್ಲ. ಅಂಥವರನ್ನು ಅವಹೇಳನ ಮಾಡಿರುವುದು ಖಂಡನೀಯ ಎಂದರಲ್ಲದೇ ಈ ಬಿಜೆಪಿಗರು ಮೊದಲಿನಿಂದಲೂ ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನದ ವಿರೋಧಿಗಳು. ಈವರೆಗೂ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಫೋಟೊ ಇಲ್ಲ. ನಮ್ಮ-ನಿಮ್ಮಗಳ ಮಧ್ಯೆ ಅನೇಕರು ಅಮಿತ್ ಷಾ ಮನಃಸ್ಥಿತಿಯವರಿದ್ದಾರೆ. ಅಂಥವರಿಗೆ ಪಾಠ ಕಲಿಸಬೇಕೆಂದರು.

ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಜಿಲ್ಲಾಧ್ಯಕ್ಷ ಸಿದ್ದು ರಾಯಣ್ಣವರ, ಮುಖಂಡರಾದ ಚಂದ್ರಶೇಖರ ಕೊಡಬಾಗಿ, ಎಸ್.ಎಂ. ಪಾಟೀಲ ಗಣಿಹಾರ, ವೈ.ಸಿ. ಮಯೂರ, ಚಂದ್ರಕಾಂತ ಸಿಂಗೆ ಅನೇಕರು ಮಾತನಾಡಿದರು.

ಇಲಿಯಾಸ್ ಬೋರಾಮಣಿ, ಭುವನೇಶ್ವರಿ ಕಾಂಬಳೆ, ರಮೇಶ ಆಸಂಗಿ, ಅನುಸೂಯಾ ಇಜೇರಿ, ಲಕ್ಷ್ಮಣ ಹಂದ್ರಾಳ, ಪ್ರಭುಗೌಡ ಪಾಟೀಲ, ಸಿದ್ದಲಿಂಗ ಬಾಗೇವಾಡಿ, ಅನೀಲ ಹೊಸಮನಿ, ಸಾಹೇಬಗೌಡ ಬಿರಾದಾರ ಮತ್ತಿತರರಿದ್ದರು. ಶ್ರೀನಾಥ ಪೂಜಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net