

ಚಿತ್ರದುರ್ಗ: ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಘೋಷಣೆ ಮುನ್ನ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಆಯೋಜಿಸುವ ಸರ್ಕಾರಿ ಕಾರ‌್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಯೇ?
ಕಲಬುರಗಿಯಲ್ಲಿ ನಡೆದ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸುವ ಬೃಹತ್ ಸಮಾವೇಶದ ಬಳಿಕ ಮತ್ತೊಂದು ಸಮಾವೇಶ ವನ್ನು ಮಧ್ಯಕರ್ನಾಟಕ ದಾವಣಗೆರೆಯ ಹೊನ್ನಾಳಿ ಬಳಿ ಮಾ.12ರಂದು ಪ್ರಧಾನಿ ನೇತೃತ್ವದಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿತ್ತು. ಫೆಬ್ರವರಿ 13ರಂದು ದುರ್ಗದಲ್ಲಿ ಪ್ರಧಾನಿ ನೇತೃತ್ವದ ಸಮಾವೇಶ ನಡೆಯಲಿದೆ ಎಂದು ಹೇಳಲಾಗಿತ್ತು.
ಈಗ ಮಾ.17 ಅಥವಾ 19 ರಂದು ಪ್ರಧಾನಿ ನೇತೃತ್ವದಲ್ಲೇ ದುರ್ಗದಲ್ಲಿ ಪಕ್ಷದ ಕಾರ‌್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದ್ದರೂ ಇದನ್ನು ಬಿಜೆಪಿಯ ಪ್ರಮುಖ ಪದಾಧಿಕಾರಿಯೊಬ್ಬರು ತಳ್ಳಿಹಾಕಿದ್ದಾರೆ.
ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ
ಈಗ ಪ್ರಧಾನಿ ಬದಲು ಅಮಿತ್‌ಷಾ ಅವರ ನೇತೃತ್ವದಲ್ಲಿ ಮಾ.24ರಂದು ಹಿರಿಯೂರು ಅಥವಾ ಶಿರಾದಲ್ಲಿ ಸಮಾವೇಶ ಆಯೋಜಿಸಲು ರಾಜ್ಯ ಸರ್ಕಾರ ಸರ್ಕಾರ ಚಿಂತನೆ ನಡೆಸಿದೆ. ಅಲ್ಲಿ 14-16 ಜಿಲ್ಲೆಗಳ ಸಾವಿರಾರು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಚಿಂತನೆಯಿದ್ದು, ಇದಕ್ಕಾಗಿ ಚಿತ್ರದುರ್ಗ ಜಿಲ್ಲಾಡಳಿತದ ಅಭಿಪ್ರಾಯವನ್ನು ಪಡೆದಿದೆ.
ಮಾ.4ರಂದು ದುರ್ಗದಲ್ಲಾದ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶದ ಯಶಸ್ಸಿನ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಲ್ಲಿಯೇ ಸಮಾವೇಶ ಆಯೋಜಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಸಮಾವೇಶಕ್ಕೆ ಷಾ ಬರಲಿದ್ದಾರೆ. ಆದರೆ ಸಮಾವೇಶದ ಸ್ಥಳ, ದಿನಾಂಕ ಅಂತಿಮವಾಗಬೇಕಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಇನ್ನು ಮಾ.19 ರಂದು ಹೊಳಲ್ಕೆರೆಯಲ್ಲಿ ಅಭಿವೃದ್ಧಿ ಕಾರ‌್ಯಕ್ರಮದಲ್ಲಿ ಸಿಎಂ ಭಾಗವಹಿಸಲಿದ್ದಾರೆ.
*ಕಂದಾಯ ಗ್ರಾಮಗಳು ಅಧಿಕ ಸಾಧ್ಯತೆ
ಚಿತ್ರದುರ್ಗ ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ಸಂಖ್ಯೆ ಹೆಚ್ಚಾಗಲಿದೆ. ಖಾಸಗಿ ಹಾಗೂ ಸರ್ಕಾರಿ ಜಮೀನಿನಲ್ಲಿರುವ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವುದು ಹಾಗೂ ಲಂಬಾಣಿ ತಾಂಡ, ಗೊಲ್ಲರ ಹಟ್ಟಿ, ಮ್ಯಾಸರ ಹಟ್ಟಿಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ಕೊಡುವು ದು, ಆ ಮೂಲಕ ಅರ್ಹ ಕುಟುಂಬಗಳಿಗೆ ಆಸ್ತಿಯ ಹಕ್ಕನ್ನು ಕಲ್ಪಿಸಲು ಚಿತ್ರದುರ್ಗ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದೆ. ಹಟ್ಟಿಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆಯಿಂದಾಗಿ ಜಿಲ್ಲೆಯಲ್ಲಿರುವ 1063 ಗ್ರಾಮಗಳ ಸಂಖ್ಯೆ 1200ಕ್ಕೂ ಅಧಿಕವಾಗಲಿವೆ.
*ಅಧಿಸೂಚನೆ
ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಜಿಲ್ಲೆಯ 194 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳ ಸರ್ಕಾರಿ/ಖಾಸಗಿ ಜಮೀನಿನಲ್ಲಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಹಾಗೂ ಕಂದಾಯ ಗ್ರಾಮಗಳ ಮಾನ್ಯತೆಗಾಗಿ ಅಧಿಸೂಚನೆ ಹೊರಡಿಸಲಾಗುತ್ತಿದೆ. ಮಾರ್ಚ್ 9ರ ಅಂತ್ಯಕ್ಕೆ 113 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ 28082 ಫಲಾನುಭವಿಗಳ ಪೈಕಿ 12076 ಹಕ್ಕುಪತ್ರ ಸಿದ್ಧಗೊಂಡಿವೆ.