

ನರೇಗಲ್ಲ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿರುವ ಶಿಕ್ಷಕ ವೃಂದ. ವಿಶಾಲವಾದ ಆಟದ ಮೈದಾನ. ಸಸ್ಯ ಸಂಪತ್ತು ಹೊಂದಿರುವ ಉದ್ಯಾನ. ಪಠ್ಯ- ಪಠ್ಯೇತರ ಚಟುವಟಿಕೆಗೆ ಪೂರಕವಾಗಿರುವ ಬೃಹತ್ ಕಟ್ಟಡ. ವಿಶಾಲವಾದ ಆಟದ ಮೈದಾನ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಸೌಲಭ್ಯಗಳು.
ಕಣಗಿನಹಾಳದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕಿರುನೋಟವಿದು. 2006- 07ರಲ್ಲಿ ಕಣಗಿನಹಾಳದಲ್ಲಿ ಪ್ರಾರಂಭವಾದ ಮುರಾರ್ಜಿ ದೇಸಾಯಿ ವಸತಿ ಶಾಲೆ ಆರಂಭದ 13 ವರ್ಷ ಬೆಟಗೇರಿಯ ಶಿವರತ್ನ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸಿತು. ನಂತರ ಕಣಗಿನಹಾಳದಲ್ಲಿ 10 ಎಕರೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿದೆ.
ಕಟ್ಟಡದ ವಿಶೇಷ: 10 ಎಕರೆ ಪ್ರದೇಶದಲ್ಲಿ 12 ತರಗತಿ, ಪ್ರಾಚಾರ್ಯರ ಕೊಠಡಿ, ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಕೊಠಡಿ, ಸಂಗೀತ ಕೊಠಡಿ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಕೊಠಡಿಗಳಿವೆ. ಬಾಲಕರ ವಸತಿ ನಿಲಯಕ್ಕೆ 9 ಕೊಠಡಿ ಬಾಲಕಿಯರ ವಸತಿಗಾಗಿ 9 ಕೊಠಡಿ, ವಿಶಾಲವಾದ ಅಡುಗೆ ಕೊಠಡಿಯೊಂದಿಗೆ ಭೋಜನಾಲಯವಿದೆ. ಸಿಬ್ಬಂದಿಗೆ ಪ್ರತ್ಯೇಕ ವಸತಿಗೃಹಗಳು ಇವೆ.
12 ವರ್ಷಗಳಿಂದ ಶೇ. 100ರಷ್ಟು ಫಲಿತಾಂಶ: ಕಣಗಿನಹಾಳ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭವಾದ ನಂತರ ಎಸ್ಸೆಸ್ಸೆಲ್ಸಿಯ 12ನೇ ಬ್ಯಾಚ್‌ನ ಫಲಿತಾಂಶವು ಶೇ 100ರಷ್ಟಾಗುವ ಮೂಲಕ ದಾಖಲೆ ನಿರ್ಮಿಸಿದೆ. ಪ್ರಸಕ್ತ ಸಾಲಿನಲ್ಲಿ 234 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಹಾಜರಾದ 44 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ರಾಷ್ಟ್ರೋತ್ಥಾನ ಸಂಸ್ಥೆ ಬೆಂಗಳೂರು ಹಮ್ಮಿಕೊಂಡಿದ್ದ ಸಾಧನ (ನೀಟ್) ಅಂತಿಮ ಪರೀಕ್ಷೆಯಲ್ಲಿ ಶಾಲೆಯ ಪ್ರೇಮಾ ಎಸ್. ಲಮಾಣಿ ತೇರ್ಗಡೆಯಾಗಿ ಶಾಲೆಯ ಕೀರ್ತಿ ಎತ್ತಿಹಿಡಿದಿದ್ದಾಳೆ.
ದೈಹಿಕ ಶಿಕ್ಷಣ ಶಿಕ್ಷಕಿ ಮಂಗಲ ಶಿವಶರಣರ ಆಸಕ್ತಿಯ ಫಲವಾಗಿ ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲೂ ಮುಂದಿದ್ದಾರೆ. ವಲಯ, ತಾಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಹತ್ತು, ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಶಾಲೆ ಗೊಡೆ ಮೇಲೆ ಚಿತ್ತಾರ
ಚಿತ್ರಕಲಾ ಶಿಕ್ಷಕ ಎಸ್.ಸಿ. ವಸ್ತ್ರದ ಕ್ರಿಯಾಶೀಲತೆಗೆ ಸಾಕ್ಷಿಯಾಗಿ ನಿಂತಿವೆ ಈ ಶಾಲೆಯ ಗೋಡೆಗಳು. ಪ್ರತಿ ತರಗತಿಯ ಗೊಡೆ ಮೇಲೆ ಚಂದದ ಚಿತ್ರಕಲೆ ಬಿಡಿಸುವ ಮೂಲಕ ಶಾಲೆಯ ಸೌಂದರ್ಯ ಹೆಚ್ಚಿಸಿದ್ದಾರೆ. ವಿಜ್ಞಾನ ಪ್ರಯೋಗಾಲಯದ ಗೊಡೆ ಮೇಲೆ ವಿಜ್ಞಾನಕ್ಕೆ ಸಂಬಂಧಿಸಿ ಚಿತ್ರಗಳು, ಕ್ರೀಡಾ ವಿಭಾಗದ ಕೊಠಡಿ ಗೋಡೆ ಮೇಲೆ ಕ್ರೀಡೆಗೆ ಸಂಬಂಧಿಸಿದ ಚಿತ್ರಗಳು, ಸಂಗೀತ ಕೊಠಡಿಯ ಗೋಡೆಗೆ ಸಂಗೀತದ ಪರಿಕರಗಳ ಚಿತ್ರಗಳನ್ನು ಬಿಡಿಸಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕದ ಮುಖ್ಯಮಂತ್ರಿಗಳು, ಪ್ರೇಕ್ಷಣಿಯ ತಾಣಗಳ ಕಲಾಕೃತಿ ನೋಡುಗರ ಕಣ್ಮನ ಸೆಳೆಯುತ್ತಿವೆ.
ಗ್ರಾಮೀಣ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ವಸತಿ ಶಾಲೆಗಳನ್ನು ಸ್ಥಾಪಿಸಿದೆ. ಇಂತಹ ಮಹತ್ತರ ಕಾರ್ಯ ಮಾಡುವುದು ನಮ್ಮ ಪುಣ್ಯವೇ ಸರಿ. ಸಹೋದ್ಯೋಗಿಗಳು, ನಿಲಯಪಾಲಕರು, ಸಿಬ್ಬಂದಿಯ ಪ್ರಾಮಾಣಿಕ ಸೇವೆಯ ಫಲವಾಗಿ ನಮ್ಮ ಶಾಲೆ ಗಣನೀಯ ಸಾಧನೆ ಮಾಡಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವಂತೆ ಮಾಡಲಾಗುತ್ತಿದೆ-ಡಿ.ಬಿ. ಅಡವಿ, ಪ್ರಾಚಾರ್ಯರು ಊಟೋಪಚಾರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆ. ನಿತ್ಯ ಬಿಸಿ ಬಿಸಿಯಾದ ತಿಂಡಿ, ಊಟ ಮತ್ತು ಉಪಾಹಾರ ವಿತರಿಸಲಾಗುತ್ತಿದೆ. ನಿಯಮಾನುಸಾರ ಭಾನುವಾರ ಚಿಕನ್, ಮೊಟ್ಟೆ ಮಂಗಳವಾರ ಸಿಹಿ ತಿನಿಸು ಕೊಡಲಾಗುತ್ತದೆ. ಮಕ್ಕಳಿಗೆ ಉತ್ತಮ ಆಹಾರ ನೀಡುವುದೇ ನಮ್ಮ ಧ್ಯೇಯ.-ಅಶೋಕ ತಂಬಾಕು, ನಿಲಯ ಪಾಲಕರು