ಕನ್ನಡತಿಗೆ ಅಮೆರಿಕದ ಪ್ರತಿಷ್ಠಿತ ಫೆಲೋಶಿಪ್

19 smg Swarnalatha
Published on

ಶಿವಮೊಗ್ಗ: ಅಮೆರಿಕದ ಹಂಟ್ಸ್‌ವಿಲ್ಲೆಯ ಅಲಬಾಮ ವಿವಿಯ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಂಶೋಧನಾ ನಿರತರಾಗಿರುವ ಶಿವಮೊಗ್ಗದ ಸ್ವರ್ಣಲತಾ ಶ್ರೀಹರ್ಷ ಅವರಿಗೆ ಜೋಂಟಾ ಇಂಟರ್‌ನ್ಯಾಷನಲ್‌ನಿಂದ ನೀಡಲಾಗುವ ಅಮೆಲಿಯಾ ಇಯರ್‌ಹಾರ್ಟ್ ಫೆಲೋಶಿಪ್ ಲಭಿಸಿದೆ.
ಏರೋಸ್ಪೇಸ್ ಇಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆಯುತ್ತಿರುವ ವಿಶ್ವದ 30 ಮಹಿಳೆಯರನ್ನು ಜೋಂಟಾ ಇಂಟರ್‌ನ್ಯಾಷನಲ್ ಪ್ರತಿವರ್ಷ ಗುರುತಿಸಿ ವಾರ್ಷಿಕ 10 ಸಾವಿರ ಡಾಲರ್ ಫೆಲೋಶಿಪ್ ನೀಡುತ್ತಿದೆ. ವಿಶ್ವದ 30 ಮಹಿಳೆಯರಲ್ಲಿ ಓರ್ವ ಕನ್ನಡತಿಯೂ ಗುರುತಿಸಲ್ಪಟ್ಟಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಅಲಬಾಮಾ ವಿವಿ ವೆಬ್‌ಸೈಟ್‌ನಲ್ಲಿ ಸ್ವರ್ಣಲತಾ ಸಾಧನೆ ಬಗ್ಗೆ ಲೇಖನ ಪ್ರಕಟಿಸಲಾಗಿದೆ. ನನಗೆ ರಾಕೆಟ್ ಸೈನ್ಸ್‌ನಲ್ಲಿ ಕೆಲಸ ಮಾಡುವ ಅತೀವ ಉತ್ಸಾಹವಿದೆ. ಕಲ್ಪನಾ ಚಾವ್ಲಾ ಹಾಗೂ ಅವರು ಕೈಗೊಂಡಿದ್ದ ಗಗನಯಾತ್ರೆ ಬಗ್ಗೆ ತಿಳಿದುಕೊಂಡು ಅದರಿಂದ ಬಹಳಷ್ಟು ಸ್ಫೂರ್ತಿ ಪಡೆದಿದ್ದೆ ಎಂದು ಆ ಲೇಖನದಲ್ಲಿ ಸ್ವರ್ಣಲತಾ ಹೇಳಿಕೊಂಡಿದ್ದಾರೆ.
ಶಿವಮೊಗ್ಗದ ಸರ್ವೋದಯ ಶಾಲೆಯಲ್ಲಿ ಪ್ರಾಥಮಿಕ, ವಿಕಾಸ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿರುವ ಈಕೆ ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಬಳಿಕ ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಅಲಬಾಮ ವಿವಿ ಪ್ರವೇಶಿಸಿದ್ದರು.
ಜೋಂಟಾ ಇಂಟರ್‌ನ್ಯಾಶನಲ್ 1938ರಲ್ಲಿ ಅಮೆಲಿಯಾ ಇಯರ್‌ಹಾರ್ಟ್ ಫೆಲೋಶಿಪ್ ಆರಂಭಿಸಿತು. ಇದುವರೆಗೆ 76 ದೇಶಗಳ 1,275 ಮಹಿಳೆಯರಿಗೆ 11.3 ಮಿಲಿಯನ್‌ಗಿಂತಲೂ ಹೆಚ್ಚಿನ ಪ್ರೋತ್ಸಾಹಧನ ನೀಡಿದೆ. ಏರೋಸ್ಪೇಸ್ ಉದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವುದು ಇದರ ಉದ್ದೇಶ.
ಸ್ವರ್ಣಲತಾ ಶ್ರೀಹರ್ಷ ಅವರು ಶಿವಮೊಗ್ಗದ ನಾಗರಿಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ, ಲೆಕ್ಕಪರಿಶೋಧಕ ಕೆ.ವಿ.ವಸಂತಕುಮಾರ್ ಮತ್ತು ಉಷಾ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net