

ಮಂಡ್ಯ: ಕನ್ನಡ ಎಂದರೆ ಕೇವಲ ಭಾಷೆಯಲ್ಲ, ಅದೊಂದು ಭಾವ ಸೇತು. ವಿಶ್ವದೆಲ್ಲೆಡೆ ಮನಸ್ಸು, ಸಂಸ್ಕೃತಿಗಳನ್ನು ಬೆಸೆಯುತ್ತಾ ಬೆಳೆಯುತ್ತಿರುವುದು ಹೆಮ್ಮೆಯ ವಿಚಾರ. ಅದೇ ರೀತಿ ಡಿ.20ರಿಂದ ಮೂರು ದಿನ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಮೆರಿಕದಲ್ಲಿರುವ ಎಲ್ಲ ಕನ್ನಡ ಮನಸ್ಸುಗಳು ಭಾಗವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಹ್ವಾನ ನೀಡಿದರು.
ಅಮೆರಿಕದ ವರ್ಜಿನಿಯಾ ರಾಜ್ಯದ ರಿಚ್ಮಂಡ್‌ನಲ್ಲಿ ನಡೆಯುತ್ತಿರುವ ಅಕ್ಕ (ಅಮೆರಿಕ ಕನ್ನಡ ಸಂಘಟನೆಗಳ ಒಕ್ಕೂಟ) ಸಮ್ಮೇಳನದಲ್ಲಿ ಮಾತನಾಡಿದ ಸಚಿವರು, ಕರ್ನಾಟಕದಲ್ಲೇ ಕನ್ನಡದ ಕಾರ್ಯಕ್ರಮಗಳ ಸಂಘಟನೆ ಕಷ್ಟಪಡಬೇಕಾದ ಸಂದರ್ಭದಲ್ಲಿ ಅಮೆರಿಕದಲ್ಲಿನ ಕನ್ನಡದ ಮನಸ್ಸುಗಳು 1998ರಲ್ಲೇ ಒಟ್ಟಾಗಿ ಇಷ್ಟೊಂದು ಸಂಘಟಿತ ಹಾಗೂ ನಿರಂತರವಾಗಿ ನುಡಿ ಹಬ್ಬ ಆಚರಿಸುತ್ತಾ ಬಂದಿರುವುದು ಅಭಿಮಾನದ ಸಂಗತಿ ಎಂದರು.
ಉದ್ಯೋಗಕ್ಕಾಗಿ ಬಂದು ಇಲ್ಲಿಯೂ ತವರಿನ ಭಾಷೆ, ಸಂಸ್ಕೃತಿಯ ಬಗ್ಗೆ ಕಾಳಜಿ ಹೊಂದಿರುವುದು ಮೆಚ್ಚುಗೆ ವಿಷಯ. ವಿಶ್ವದೆಲ್ಲೆಡೆ ಇದೇ ರೀತಿ ಕನ್ನಡದ ಕಂಪು ಪಸರಿಸಲಿ. ಅಮೆರಿಕದಲ್ಲಿನ ಕನ್ನಡದ ಮನಸ್ಸುಗಳು ಕರುನಾಡಿನ ಭಾಷೆ, ಸಂಸ್ಕೃತಿ ವೃದ್ಧಿಗೆ ಕೈಜೋಡಿಸಿರುವಂತೆ ನಮ್ಮ ಕೃಷಿ ತಂತ್ರಜ್ಞಾನದ ಅಭಿವೃದ್ಧಿಗೂ ನೆರವಾಗಬೇಕು. ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಸಾಹಿತ್ಯಿಕವಾಗಿ ಶ್ರೀಮಂತವಾಗಿದೆ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುತ್ತಾ ಕನ್ನಡದ ದೀಪವನ್ನು ಮನೆ ಮನೆಗಳಲ್ಲಿ ಬೆಳಗೋಣ. ಸಕ್ಕರೆ ನಾಡಿನ ನುಡಿ ಜಾತ್ರೆಯಲ್ಲಿಯೂ ನೀವೆಲ್ಲರೂ ಪಾಲ್ಗೊಂಡು ಕನ್ನಡದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜಗದ್ಗುರು ವಚನಾನಂದ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಶಾಸಕರಾದ ಎಸ್.ಟಿ.ಸೋಮಶೇಖರ್, ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಅಕ್ಕ ಸಂಸ್ಥೆ ಅಧ್ಯಕ್ಷ ರವಿ ಬೋರೇಗೌಡ, ಸಂಸ್ಥಾಪಕ ಅಧ್ಯಕ್ಷ ಡಾ.ಅಮರನಾಥಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಇತರರಿದ್ದರು.