

ಬೆಂಗಳೂರು: ಸಿಎಜಿ ವರದಿಗಳ ಆಧಾರದಲ್ಲಿ ಭ್ರಷ್ಟ ಸರ್ಕಾರಿ ಅಧಿಕಾರಿ ಮತ್ತು ನೌಕರರನ್ನು ಶಿಕ್ಷೆಗೆ ಒಳಪಡಿಸಲು ಅನುಕೂಲವಾಗುವಂತೆ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ಧರಿಸಿದೆ.
ಪ್ರತಿಯೊಂದು ಇಲಾಖೆಯ ಲೆಕ್ಕಪತ್ರವನ್ನು ಸಿಎಜಿ ಸಿದ್ಧಪಡಿಸಿರು ತ್ತದೆ. ಅದರ ಆಧಾರದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚೆಯಾಗುತ್ತದೆ. ಸಮಿತಿ ಸಹ ಕೆಲವೊಂದು ಶಿಫಾರಸುಗಳನ್ನು ವಿಧಾನಮಂಡಲಕ್ಕೆ ಸಲ್ಲಿಸುತ್ತದೆ. ಆದರೆ ಯಾವುದೇ ಪರಿಣಾಮ ಬೀರುತ್ತಿಲ್ಲ. ತಪ್ಪಿತಸ್ಥ ಅಧಿಕಾರಿ ಮತ್ತು ನೌಕರರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದರೂ, ಪ್ರತಿಯೊಂದು ಇಲಾಖೆ ಅಧಿಕಾರಿಗಳು ಕ್ರಮಕ್ಕೆ ನಿರಾಸಕ್ತಿ ತೋರಿಸುತ್ತಿದ್ದಾರೆ. ಭ್ರಷ್ಟರನ್ನು ರಕ್ಷಿಸುವ ಕೆಲಸವೇ ಆಗುತ್ತಿದೆ. ಆದ್ದರಿಂದಲೇ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾರಣಗಳೇನು?: ಯಾವುದೇ ತನಿಖೆ 4 ವರ್ಷದಲ್ಲಿ ಮುಗಿಯದಿದ್ದರೆ, ಆನಂತರ ಅಂತಹ ಅಧಿಕಾರಿಗೆ ಎಲ್ಲ ಸೌಲಭ್ಯಗಳು ತಾನೇ ತಾನಾಗಿ ಸಿಗುತ್ತವೆ. ಆದ್ದರಿಂದ ಬಹುತೇಕ ಅಧಿಕಾರಿಗಳು ಹಾಗೂ ನೌಕರರು ನಾಲ್ಕು ವರ್ಷಗಳ ಕಾಲ ಕಾದು ನಂತರ ಪ್ರಕರಣಗಳಿಂದ ಹೊರ ಬರುತ್ತಿದ್ದಾರೆ. ಆರು ವರ್ಷಕ್ಕೆ ಏರಿಸಿದರೆ ಭ್ರಷ್ಟರಿಗೆ ಸ್ವಲ್ಪ ಮಟ್ಟಿನ ಹೆದರಿಕೆ ಇರುತ್ತದೆ. ಯಾರಾದರೂ ನಿವೃತ್ತಿ ಅಥವಾ ನಿಧನರಾಗುತ್ತಿದ್ದಂತೆ ವಸೂಲಿ ಪ್ರಕ್ರಿಯೆ ಸಹ ನಿಂತು ಹೋಗಿರುತ್ತದೆ. ಆದ್ದರಿಂದಲೇ ಸೇವಾ ನಿಯಮಗಳಲ್ಲಿ ಎರಡು ಬಗೆಯ ತಿದ್ದುಪಡಿಯಾದರೆ ಆಗ ಭ್ರಷ್ಟರ ಮೇಲೆ ಒಂದಷ್ಟು ಕಣ್ಣಿಡಲು ಸಾಧ್ಯವಾಗುತ್ತದೆ.
ತಿದ್ದುಪಡಿ ಶಿಫಾರಸು
1. ಶಿಕ್ಷೆ ವಿಧಿಸಲು ಇರುವ ಅವಧಿಯನ್ನು 4 ವರ್ಷದಿಂದ ಆರು ವರ್ಷಕ್ಕೆ ಏರಿಕೆ.
2. ಭ್ರಷ್ಟ ಅಧಿಕಾರಿ ನಿವೃತ್ತರಾದರೆ ಅಥವಾ ನಿಧನರಾದರೆ ನಿವೃತ್ತಿ ನಂತರದ ಸೌಲಭ್ಯಗಳಿಂದ ಕಟ್ಟುನಿಟ್ಟಾಗಿ ವಸೂಲಿ.
ಮಾಹಿತಿ ಕೋರಿಕೆ
ಯಾವುದೇ ಇಲಾಖೆಯಲ್ಲಿ ಅಧಿಕಾರಿ ಹಾಗೂ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅನುಮತಿ ಕಡ್ಡಾಯ. ಆದರೆ ಡಿಪಿಎಆರ್ ಬೇಗ ಅನುಮತಿ ನೀಡುವುದಿಲ್ಲ. ಸ್ಪಷ್ಟನೆ ಕೋರುವುದರಲ್ಲೇ ನಾಲ್ಕು ವರ್ಷ ಕಳೆದಿರುವ ಸಾಕಷ್ಟು ಉದಾಹರಣೆಗಳಿವೆ. ಆದ್ದರಿಂದ ಎಷ್ಟು ಅಧಿಕಾರಿ ಹಾಗೂ ಸಿಬ್ಬಂದಿಗಳ ಬಗ್ಗೆ ಅನುಮತಿ ನೀಡುವುದು ಬಾಕಿ ಇದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಲೆಕ್ಕಪತ್ರ ಸಮಿತಿ ಮೂರು ಪತ್ರಗಳನ್ನು ಬರೆದಿದೆ. ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತಂದಿದೆ. ಆದರೂ ಮಾಹಿತಿ ಸಿಕ್ಕಿಲ್ಲ. ಒಂದು ಅಂದಾಜಿನ ಪ್ರಕಾರ, ಸುಮಾರು 500 ಜನರ ವಿರುದ್ಧ ಶಿಕ್ಷೆ ನೀಡುವುದಕ್ಕೆ ಅನುಮತಿ ನೀಡುವುದು ಬಾಕಿ ಇದೆ. ಇದೇ ಅಧಿವೇಶನದಲ್ಲಿಯೇ ತಿದ್ದುಪಡಿಗೆ ಶಿಫಾರಸು ಮಾಡುವುದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಉದ್ದೇಶವಾಗಿದೆ.